'ಪರಿಸರ ನಾಶ ತಡೆಗಟ್ಟಿ'
ಚಿಕ್ಕಮಗಳೂರು: ಪರಿಸರ ನಾಶವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ವಲಯಾರಣ್ಯಾಧಿಕಾರಿ ಅಬ್ದುಲ್ ಅಜೀಜ್ ಹೇಳಿದ್ದಾರೆ.
ಲಯನ್ಸ್, ಲಯನೆಸ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಬಿಜಿಎಸ್ ಕಾಲೇಜು ಅವರಣದಲ್ಲಿ ನಡೆದ ವನಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೌರವ್ಯೂಹದ ಜೀವಂತ ಗ್ರಹವಾಗಿರುವ ಭೂಮಿಯಲ್ಲಿ ಅರಣ್ಯ ನಾಶದಿಂದ ಮರುಭೂಮಿ ಹೆಚ್ಚಾಗುತ್ತಿದೆ. ಇದರಿಂದ ಸಮುದ್ರದಲ್ಲಿ ಸುನಾಮಿ ಆಗಿ ಪರಿಸರ ನಾಶವಾಗುತ್ತಿದೆ ಎಂದರು.
ನೀರಿಗಾಗಿ ಹೋರಾಟ: ಅರಣ್ಯ ನಾಶದಿಂದ ನಾವಿಂದು ನೀರಿಗಾಗಿ ಹೋರಾಡುವಂತಾಗಿದೆ. ಮುಂದಿನ ದಿನಗಳಲ್ಲಿ ಪರಿಸರ ನಾಶವಾದರೆ ಜೀವಜಲ ಕೂಡಾ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ತಂದೆ, ತಾಯಿ, ಗುರುಗಳನ್ನು ಪ್ರೀತಿಸಿ ಗೌರವಿಸುವಂತೆ ಪರಿಸರವನ್ನು ಪ್ರೀತಿಸಿ ಪೋಷಿಸಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳು ಸ್ನೇಹಿತರೊಂದಿಗೆ ರಜಾ ದಿನಗಳಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರೆ ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಮತ್ತು ಪರಿಸರ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಲಯನೆಸ್ ಅಧ್ಯಕ್ಷೆ ನೇತ್ರಾ ವೆಂಕಟೇಶ್ ಮಾತನಾಡಿ, ನಾವು ಪರಿಸರವನ್ನು ಪ್ರೀತಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ. ಜಾಗತಿಕ ತಾಪಮಾನದಿಂದ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ, ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಇನ್ನೂ ಹೆಚ್ಚು ಆರೋಗ್ಯ ಮತ್ತು ನೈರ್ಮಲ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಪರಿಸರದ ಬಗ್ಗೆ ಕಾಳಜಿವಹಿಸಿ ಕಾಡನ್ನು ಬೆಳೆಸುವ ಮತ್ತು ಉಳಿಸುವ ಕರ್ತವ್ಯ ಎಲ್ಲರ ಮೇಲಿದೆ ಎಂದರು.
ಬಿಜಿಎಸ್ ಪ್ರಾಂಸುಪಾಲ ಸುರೇಂದ್ರ, ಲಯನ್ಸ್ ವಲಯಾಧ್ಯಕ್ಷ ಹೇಮಂತ್ ಪ್ರಭು, ರೂಪಾ ಹೇಮಂತ್ ಪ್ರಭು ಉಪಸ್ಥಿತರಿದ್ದರು. ರೇಣುಕಾಬಾಯಿ ಪ್ರಾರ್ಥಿಸಿದರು, ಅನುಸೂಯ ಜಗದೀಶ್ ಸ್ವಾಗತಿಸಿದರು, ಚಂದ್ರಾವತಿ ಶಂಕರ್ ವಂದಿಸಿದರು. ಶಿಕ್ಷಕಿ ಹಂಸಶ್ರೀ ನಿರೂಪಿಸಿದರು.