ಸೌಲಭ್ಯ ನೀಡಲು ತೆಲುಗುಗೌಡ ಜನಾಂಗ ಮನವಿ
ಕಡೂರು: ರಾಜ್ಯ ತೆಲುಗುಗೌಡ ಮಹಾಸಭಾದ ತಾಲೂಕು ಶಾಖೆಯಿಂದ ತೆಲುಗುಗೌಡ ಜನಾಂಗಕ್ಕೆ ರಾಜಕೀಯ ಮೀಸಲಾತಿ ದೊರಕಿಸಲು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.
ಮಹಾಸಭಾದ ತಾಲೂಕು ಅಧ್ಯಕ್ಷ ಜಿಗಣೇಹಳ್ಳಿ ಮಂಜು, ಗೌರವಾಧ್ಯಕ್ಷ ಎಂ.ಡಿ. ಗೋವಿಂದಪ್ಪ, ಕಾರ್ಯದರ್ಶಿ ಎಸ್.ಜಿ. ಕೊಪ್ಪಲು ನಾಗರಾಜ್, ಸಂಘಟನಾ ಕಾರ್ಯದರ್ಶಿ ಕುರುಬಗೆರೆ ಮಹೇಶ್ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಅರ್ಪಿಸಿದ ಮುಖಂಡರು ಮಾತನಾಡಿ, ರಾಜ್ಯದಲ್ಲಿ ತೆಲುಗುಗೌಡ ಜನಾಂಗ ಎಲ್ಲ ರೀತಿಯಿಂದಲೂ ಹಿಂದುಳಿದ ಜನಾಂಗವಾಗಿದ್ದು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಸಮುದಾಯದವರು ಮೂಲ ಸವಲತ್ತುಗಳು ಇಲ್ಲದೆ ಅಸಹನೀಯ ಬದುಕನ್ನು ಸವೆಸುತ್ತಿದ್ದಾರೆ ಎಂದು ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ಸಮುದಾಯದ ವಕೀಲ ಹುಲ್ಲೇಹಳ್ಳಿ ರಾಜಶೇಖರ್, ಗಾಳಿಹಳ್ಳಿಯ ಲಕ್ಷ್ಮಣ್, ನಿಜಗುಣ, ಚಿಕ್ಕಯ್ಯ, ರಾಜಪ್ಪ, ಸಿ.ಎಸ್. ದಾಸೇಗೌಡ, ನಾರಾಯಣ ಮೊದಲಾದವರು ಇದ್ದರು.