ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಆ.21
ಚಿಕ್ಕಮಗಳೂರು ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸುವಂತೆ ರೈತ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ನಿರಂತರವಾಗಿ ಸುರಿದಿರುವ ಮಳೆಯಿಂದಾಗಿ ಕಾಫಿ, ಅಡಕೆ, ಮೆಣಸು ಸೇರಿದಂತೆ ಇತರೆ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿವೆ. ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡಿ ಬೋರ್ಡೋ ದ್ರಾವಣ ಸಿಂಪಡಿಸಿದರೂ ಕೊಳೆರೋಗ ನಿಯಂತ್ರಣಕ್ಕೆ ಬಾರದೆ ಎಲೆಕೊಳೆ, ಕಾಯಿಕೊಳೆ ರೋಗ ವ್ಯಾಪಕವಾಗಿ ಆವರಿಸಿರುವುದರಿಂದ ಗಿಡಗಳೂ ಸಹ ನಾಶವಾಗುತ್ತಿದ್ದು, ಬೆಳೆಗಾರರು ಶೇ.80ರಷ್ಟು ಬೆಳೆ ಕಳೆದುಕೊಂಡು ಆರ್ಥಿಕ ನಷ್ಟ ಎದುರಿಸುತ್ತಿದ್ದಾರೆ.
250 ಕೋಟಿಗೂ ಅಧಿಕ ನಷ್ಟ: ಜಿಲ್ಲೆಯ ಸುಮಾರು 85425 ಹೆಕ್ಟೇರ್ ಕಾಫಿ ಪ್ರದೇಶದಲ್ಲಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 750 ಕೋಟಿ ಕಾಫಿ ಬೆಳೆ ನಷ್ಟವುಂಟಾಗಿದೆ. ಕಾಳು ಮೆಣಸು ಸುಮಾರು 200 ಕೋಟಿಗೂ ಹೆಚ್ಚು ನಷ್ಟ ಉಂಟಾಗಿರುತ್ತದೆ.
ಅಡಕೆ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇ. 90ರಷ್ಟು ಬೆಳೆ ಉದುರಿ ಸುಮಾರು 250 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಹೀಗೆ ಜಿಲ್ಲೆಯಾದ್ಯಂತ ಕಾಫಿ, ಅಡಕೆ, ಕಾಳುಮೆಣಸು ಇತರೆ ಬೆಳೆಗಳು ಎಲೆಕೊಳೆ ಮತ್ತು ಕಾಯಿಕೊಳೆ ಇತರೆ ವಿವಿಧ ರೋಗದಿಂದ ಬೆಳೆ ನಷ್ಟವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬ್ಯಾಂಕ್ ಸಾಲ, ಖಾಸಗಿ ಸಾಲ ಪಡೆದು ಬೆಳೆಯ ಮೇಲೆ ಬಂಡವಾಳ ತೊಡಗಿಸಿದ್ದು, ಬೆಳೆ ಕಳೆದುಕೊಂಡು ಬೆಳೆಗಾರರು ನಷ್ಟಕ್ಕೊಳಗಾಗಿದ್ದಾರೆ. ಕಾಫಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಅತೀವೃಷ್ಟಿಯಿಂದ ಕೊಳೆರೋಗಕ್ಕೆ ತುತ್ತಾಗಿರುವ ಪ್ರದೇಶದ ಬೆಳೆ ಅತೋಟಿಗೆ ಸಲಹೆ ನೀಡಿರುವಂತೆ ಕಾಫಿ, ಅಡಕೆ, ಕೊಳೆರೋಗ ಪೀಡಿತ ಎಲೆ, ಉದುರಿರುವ ಕಾಯಿ ಮತ್ತು ಗಿಡಗಳಲ್ಲಿರುವ ತರಗೆಲೆಗಳನ್ನು ಆರಿಸಿ ಸುಡಲು ಹಾಗೂ ಅತೀ ತೇವಾಂಶ ತಡೆಗಟ್ಟಲು ನೀರು ಬಸಿ ಕಾಲುವೆಗಳನ್ನು ಸುಸ್ಥಿತಿಯಲ್ಲಿಡುವಂತೆ ಮತ್ತು ಔಷಧಿ ಸಿಂಪರಣೆಗೆ ಸಲಹೆ ನೀಡಿದ್ದಾರೆ.
10- 12 ವರ್ಷದಿಂದ ಅತೀವೃಷ್ಟಿ: ಈಗಾಗಲೇ ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡಿ ಇಲ್ಲಿಯವರೆಗೆ ಬೆಳೆಗಾರರು ಹಣ ಕಳೆದುಕೊಂಡು ನಷ್ಟದಲ್ಲಿದ್ದು ಪುನಾ ಮಂಡಳಿಯ ಸಲಹೆಯಂತೆ ಖರ್ಚು ಮಾಡಲು 1 ಹೆಕ್ಟೇರಿಗೆ 25 ರಿಂದ 35 ಸಾವಿರ ಬಂಡವಾಳ ತೊಡಗಿಸಬೇಕಾಗಿದೆ.
ಬೆಳೆಗಾರರು ಬಹಳಷ್ಟು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಬೆಳೆ ಉಳಿಸಿಕೊಳ್ಳುವುದೇ ಬಹಳ ದುಸ್ತರವಾಗಿರುತ್ತದೆ.
ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ಅನಾವೃಷ್ಟಿ ಅಕಾಲಿಕ ಮಳೆಯಂತ ಹವಾಮಾನ ವೈಪರೀತ್ಯದಿಂದ ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗಿ ತೋಟವೇ ನಾಶದ ಅಂಚಿನಲ್ಲಿವೆ.
ಸಾಲ ಸಿಗುವಂತೆ ಮಾಡಿ: ಸಹಕಾರ ಸಂಘಗಳಲ್ಲಿ ಕಳೆದ ಬಾರಿ ಪಡೆದ ಸಾಲದಲ್ಲಿ ಹಿಂದಿನ ಸರ್ಕಾರ 25 ಸಾವಿರಗಳ ಸಾಲ ಮನ್ನಾ ಘೋಷಣೆ ಮಾಡಿರುವಂತೆ ಸಹಕಾರ ಸಂಘಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡದೆ ಸಾಲ ಪಡೆದ ಜಿಲ್ಲೆಯ ರೈತರಿಗೆ ಮರು ಸಾಲ ಸಿಗದೆ, ಬಹಳಷ್ಟು ತೊಂದರೆಯಲ್ಲಿದ್ದಾರೆ. ಆದ್ದರಿಂದ ಅತೀವೃಷ್ಟಿಯಿಂದ ಬೆಳೆ ಕಳೆದುಕೊಂಡು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ಘೋಷಿಸಿರುವಂತೆ ಸಾಲ ಮನ್ನಾ ಹಣ ತಕ್ಷಣದಿಂದಲೇ ಸಹಕಾರ ಸಂಘಗಳಿಗೆ ಬಿಡುಗಡೆಗೊಳಿಸಿ ರೈತರಿಗೆ ಸಾಲ ಸಿಗುವಂತೆ ಕ್ರಮ ಕೈಗೊಳ್ಳಬೇಕು.
ಬಯಲುಸೀಮೆಯ ತರೀಕೆರೆ, ಕಡೂರು, ಚಿಕ್ಕಮಗಳೂರು ಭಾಗದಲ್ಲಿ ಆಲೂಗಡ್ಡೆ, ಈರುಳ್ಳಿ ಇತರೆ ತರಕಾರಿ ಬೆಳೆಗಳು ಅಂಗಮಾರಿ ರೋಗ ಮತ್ತು ವಿವಿಧ ರೋಗಗಳಿಂದ ಸಂಪೂರ್ಣ ನಾಶವಾಗಿರುತ್ತದೆ.
ಆದ್ದರಿಂದ ರೈತರಿಗಾಗಿರುವ ನಷ್ಟವನ್ನು ಸರ್ಕಾರ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆವತಿಯಿಂದ ವಿವಿಧ ಬೆಳೆಗಳ ನಷ್ಟದ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಬೆಳೆಗಾರರಿಗೆ ಅತೀವೃಷ್ಟಿಯಿಂದ ಆಗಿರುವ ಬೆಳೆ ನಷ್ಟವನ್ನು ಸಮೀಕ್ಷೆ ನಡೆಸಬೇಕು.
ಚಿಕ್ಕಮಗಳೂರು ಜಿಲ್ಲೆಯನ್ನು ಅತೀವೃಷ್ಟಿ ಪ್ರದೇಶವೆಂದು ಘೋಷಿಸಿ, ರಾಷ್ಟ್ರೀಯ ದುರಂತವೆಂದು ಪರಿಗಣಿಸಿ ಜಿಲ್ಲೆಯಲ್ಲಿ ವ್ಯಾಪಕವಾಗಿ ನಷ್ಟವುಂಟಾಗಿರುವ ಬಗ್ಗೆ ಸರ್ಕಾರ ಮಧ್ಯ ಪ್ರವೇಶಿಸಿ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ.
ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಡಿ.ಆರ್. ದುಗ್ಗಪ್ಪಗೌಡ, ನಾಗರಾಜ್, ದಯಾಕರ್, ನಾಗೇಶ್, ಕೆ.ಪಿ. ಅಶೋಕ್, ಎಂ. ಪಾಯಿಸ್ ಅವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.