ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ತಲುಪಲಿ: ಎಸಿ
ಕ.ಪ್ರ.ವಾರ್ತೆ ಟಿ ನ.ರಾ.ಪುರ ಟಿ ಆ.21
ಸರ್ಕಾರದ ಹೊಸ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲಪಿಸಲು ಅನುಕೂಲವಾಗುವಂತೆ ಅದಾಲತ್ ಮೂಲಕ ಮಾಹಿತಿ ನೀಡುವಂತೆ ಸರ್ಕಾರ ಆದೇಶಿಸಿದೆ ಎಂದು ತರೀಕೆರೆ ಉಪ ವಿಭಾಗಾಧಿಕಾರಿ ಅನುರಾಧಾ ತಿಳಿಸಿದರು.
ಬುಧವಾರ ತಾಲೂಕು ಕಚೇರಿಯಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮನಸ್ವಿನಿ, ಮೈತ್ರಿ ಯೋಜನೆ, ಅಮ್ ಆದ್ಮಿ ಭಿಮಾ ಯೋಜನೆ, ಜನಶ್ರೀ ಯೋಜನೆಯ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಹಿಂದೆ ಬಿಪಿಎಲ್ ಕಾರ್ಡುದಾರರಿಗೆ ವಿವಿಧ ಮಾಶಾಸನಗಳಾದ ವಿಧವಾ ವೇತನ, ಸಂದ್ಯಾ ಸುರಕ್ಷಾ, ನಿರ್ಗತಿಕ ವೃದ್ಧಾಪ್ಯ ವೇತನ, ಅಂಗವಿಕಲ ವೇತನವನ್ನು ಅರ್ಹತೆ ಆಧಾರದ ಮೇಲೆ ನೀಡಲಾಗುತ್ತಿತ್ತು. ಆದರೆ, ಅದರಲ್ಲಿ ಕೆಲವು ಲೋಪ ದೋಷಗಳು ಇದ್ದು ಅದನ್ನು ಸರಿಪಡಿಸುವ ದೃಷ್ಟಿಯಿಂದ ಆ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಮರು ಪರಿಶೀಲನೆ ಮಾಡಿದ ನಂತರ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅಂಗವಿಕಲರು ಶೇ.40 ರಷ್ಟು ಅಂಗವಿಕಲತೆ ಹೊಂದಿದ್ದರೂ ವೇತನಕ್ಕೆ ಅರ್ಜಿ ಹಾಕಬಹುದಾಗಿದೆ. ಯಾವುದೇ ವೇತನ ಪಡೆಯಲು ಆದಾಯದ ಮಿತಿ ಹಾಕಲಾಗಿದ್ದು ನಗರ ಪ್ರದೇಶದವರಿಗೆ 17 ಸಾವಿರ ಹಾಗೂ ಗ್ರಾಮೀಣ ಪ್ರದೇಶದವರಿಗೆ 12 ಸಾವಿರ ಆದಾಯ ಮಾತ್ರ ಇರಬೇಕಾಗಿದೆ ಎಂದರು.
ಮನಸ್ವಿನಿ ಯೋಜನೆ: ಸರ್ಕಾರದ ನೂತನ ಮನಸ್ವಿನಿ ಯೋಜನೆಯಡಿ ಅವಿವಾಹಿತ ಅಥವಾ ವಿವಾಹ ವಿಚ್ಛೇದನ ಪಡೆದ 40 ವರ್ಷ ಮೇಲ್ಪಟ್ಟ 64 ವರ್ಷದ ಒಳಗಿನ ಮಹಿಳೆಯರು ತಹಸೀಲ್ದಾರ್ಗೆ ಯೋಜನೆಗೆ ಅರ್ಜಿ ಹಾಕಬಹುದು. ಅರ್ಜಿದಾರರು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಮಾಸಿಕ 500 ರುಪಾಯಿ ವೇತನ ದೊರೆಯಲಿದೆ. ಆದಾಯದ ಮಿತಿ ನಗರ ಪ್ರದೇಶದವರಿಗೆ 17 ಸಾವಿರ ಹಾಗೂ ಗ್ರಾಮೀಣ ಪ್ರದೇಶದವರಿಗೆ 12 ಸಾವಿರ ರುಪಾಯಿ ಇರಬೇಕು ಎಂದು ತಿಳಿಸಿದರು.
ಮೈತ್ರಿ ಯೋಜನೆ: ಮೈತ್ರಿ ಯೋಜನೆಯಡಿ ಆರ್ಥಿಕ, ಸಾಮಾಜಿಕ ಹಿಂದುಳಿದ ಲಿಂಗತ್ವ ಅಲ್ಪ ಸಂಖ್ಯಾತರು ಅರ್ಜಿ ಸಲ್ಲಿಸಬಹುದು. 40 ರಿಂದ 60 ವರ್ಷದ ವಯೋವಾನದವರಿಗೆ ಮಾಸಿಕ ಪಿಂಚಣಿ 500 ರುಪಾಯಿ ಪಡೆಯಲು ಅವಕಾಶವಿದೆ. ಅರ್ಜಿದಾರರು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಆದಾಯದ ಮಿತಿ ನಗರ ಪ್ರೇದಶದವರಿಗೆ 17 ಸಾವಿರ ರುಪಾಯಿ ಹಾಗೂ ಗ್ರಾಮೀಣ ಪ್ರದೇಶದವರಿಗೆ 12 ಸಾವಿರ ರುಪಾಯಿ ಎಂದರು.
ಅಮ್ ಆದ್ಮಿ ಭಿಮಾ ಯೋಜನೆ: ಬಿಪಿಎಲ್ ಕಾರ್ಡುದಾರರಿಗೆ ಹಾಗೂ 47 ವಿವಿಧ ಕಸುಬುದಾರರಿಗೆ ವಿಮಾ ಯೋಜನೆ ಕಲ್ಪಿಸುವ ಅಮ್ ಆದ್ಮಿ ಭಿಮಾ ಯೋಜನೆ ಜಾರಿಗೆ ಬಂದಿದೆ. ಈ ವಿಮಾ ಯೋಜನೆಯಡಿ ನೈಸರ್ಗಿಕವಾಗಿ ಮೃತ ಪಟ್ಟರೆ 30 ಸಾವಿರ, ಆಕಸ್ಮಿಕವಾಗಿ ಮೃತ ಪಟ್ಟರೆ 75 ಸಾವಿರ,ಅಗ್ನಿ ಆಕಸ್ಮಿಕದಿಂದ ಮೃತ ಪಟ್ಟರೆ 35,500 ರುಪಾಯಿ, ಸಂಪೂರ್ಣ ಅಂಗವಿಕಲರಾದರೆ 75 ಸಾವಿರ ನೀಡಲಾಗುತ್ತದೆ. ತಾಲೂಕು ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ಸರ್ಕಾರದ ಹೊಸ ಯೋಜನೆ ಬಗ್ಗೆ ಸಾರ್ವಜನಿಕರು ತಹಸೀಲ್ದಾರ್ ಕಚೇರಿಯಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಭಾರಿ ತಹಸೀಲ್ದಾರ್ ಲೋಕೇಶಪ್ಪ, ಸಿಡಿಪಿಒ ಜ್ಯೋತಿ ಲಕ್ಷ್ಮಿ ಇದ್ದರು.