ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗುಡಿಸಲುಗಳ ತೆರವು; ಡಿಸಿ ಕಚೇರಿ ಎದುರು ಪ್ರತಿಭಟನೆ

Lingaraj Badiger
Updated On : 23 Aug 2013, 10:53 am

ಚಿಕ್ಕಮಗಳೂರು: ವಾಸವಾಗಿದ್ದ ಗುಡಿಸಲುಗಳನ್ನು ಕಂದಾಯ ಇಲಾಖೆಯವರು ತೆರವುಗೊಳಿಸಿರುವುದನ್ನು ಖಂಡಿಸಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ತಾಲೂಕು ಕಚೇರಿ ಎದುರು ಸಿಪಿಐ ನೇತೃತ್ವದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಟಿಯುಸಿಐ ನೇತೃತ್ವದಲ್ಲಿ ನಿವಾಸಿಗರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಹವ್ವಳ್ಳಿ ಸರ್ವೇ ನಂಬರ್ 328ರಲ್ಲಿ ಗುಡ್ಡದೂರು ಗ್ರಾಮದ ದಲಿತರು ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದಾರೆ. ತಾವು ಹಲವು ವರ್ಷಗಳಿಂದ ಇದೇ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದು, ತಮಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಆಹಾರ ಧಾನ್ಯ ವಶ: ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದು, ತಮಗೆ ಹಕ್ಕು ಪತ್ರ ನೀಡುವ ಜತೆಗೆ ಮೂಲ ಸೌಲಭ್ಯ ನೀಡಬೇಕೆಂದು ವಿವಿಧ ಹಂತಗಳಲ್ಲಿ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಇದರ ನಡುವೆ ಬುಧವಾರ ರಾತ್ರಿ ಕಂದಾಯ ಇಲಾಖೆಯವರು ಪೊಲೀಸರ ಸಹಾಯದೊಂದಿಗೆ ಗುಡಿಸಲು ತೆರವುಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಗುಡಿಸಲು ನಿವಾಸಿಗಳು ಹೊಂದಿದ್ದ ಆಹಾರ ಧಾನ್ಯಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ತಳ್ಳಾಟ: ಇದರಿಂದಾಗಿ ಅತಂತ್ರಗೊಂಡ ನಿವಾಸಿಗರ ಒಂದು ಗುಂಪು ಸಿಪಿಐ ನೇತೃತ್ವದಲ್ಲಿ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿತು. ಬಳಿಕ ತಾಲೂಕು ಕಚೇರಿ ಆವರಣದೊಳಗೆ ಏಕಾ ಏಕಿ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರತ್ತ ಲಾಠಿ ಬೀಸಿ ಅವರನ್ನು ತಡೆಯುವ ಕೆಲಸ ಮಾಡಿದರು. ಆದಕ್ಕೆ ಜಗ್ಗದ ಪ್ರತಿಭಟನಾಕಾರರು ತಾಲೂಕು ಕಚೇರಿ ಆವರಣದೊಳಗೆ ಧರಣಿ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಪ್ರತಿಭಟನಾಕಾರರ ಹಾಗೂ ಪೊಲೀಸರ ನಡುವೆ ತಳ್ಳಾಟ ಉಂಟಾಗಿದ್ದರಿಂದ ತಾಲೂಕು ಕಚೇರಿಗೆ ಕೆಲಸ ನಿಮಿತ್ತ ಬಂದಿದ್ದ ಕೆಲ ಸಾರ್ವಜನಿಕರಿಗೆ ತೊಂದರೆಯಾಯಿತು.
ಪ್ರತಿಭಟನೆ: ಇತ್ತ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದ್ದ ವೇಳೆಯಲ್ಲಿ ಅತ್ತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಟಿಯುಸಿಐ ನೇತೃತ್ವದಲ್ಲಿ ಗುಡಿಸಲು ನಿವಾಸಿಗರು ಧರಣಿ ನಡೆಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರತಿಭಟನೆಯ ನೇತೃತ್ವ ವಹಿಸಿದ್ದವರೊಂದಿಗೆ ಜಿಲ್ಲಾಧಿಕಾರಿ ಶೇಖರಪ್ಪ ಅವರು ಮಾತುಕತೆ ನಡೆಸಿದರು.
ಈಗ ಗುಡಿಸಲು ಕಟ್ಟಿಕೊಂಡು ವಾಸವಾಗಿರುವ ಜಾಗ ಕಂದಾಯ ಭೂಮಿ ಅಲ್ಲ. ಬೇರೆಡೆಗೆ ಸ್ಥಳವಕಾಶ ಮಾಡಿಕೊಡುವುದಾಗಿ ಹೇಳಿ ಪ್ರತಿಭಟನೆ ಕೈಬಿಡುವಂತೆ ಕೋರಿದರು. ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ, ಸಿಪಿಐ ಮುಖಂಡರಾದ ಜಿ. ರಘು, ಮಂಜುನಾಥ್ ಹಾಗೂ ಗುಡಿಸಲು ನಿವಾಸಿಗರು ಹಾಜರಿದ್ದರು.
ಸಭೆಯ ಬಳಿಕವೂ ಪ್ರತಿಭಟನಾಕಾರರು ಧರಣಿ ಮುಂದುವರೆಸಿದ್ದರು. ಆಗ ಸ್ಥಳಕ್ಕೆ ಜಿಲ್ಲಾಧಿಕಾರಿ ಶೇಖರಪ್ಪ ಅವರೊಂದಿಗೆ ಆಗಮಿಸಿದ ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ದಲಿತರಿಗೆ ನಿವೇಶನಗಳಿಲ್ಲ.
ಸದ್ಯದ ಅಂದಾಜಿನ ಪ್ರಕಾರ ಸುಮಾರು 10 ಸಾವಿರ ಖಾಲಿ ನಿವೇಶನಗಳ ಅಗತ್ಯತೆ ಇದೆ. ಆದರೆ, ಬೇಡಿಕೆಯಷ್ಟು ನಿವೇಶನವನ್ನು ಒದಗಿಸಲು ತಕ್ಷಣಕ್ಕೆ ಸಾಧ್ಯವಿಲ್ಲ. ಇದಕ್ಕೆ ಕನಿಷ್ಟ ಮೂರು ತಿಂಗಳಾದರೂ ಕಾಲಾವಕಾಶಬೇಕು ಎಂದರು.
ಸದ್ಯ ಗುಡಿಸಲು ಕಟ್ಟಿಕೊಂಡಿರುವ ಪ್ರದೇಶ ಆಯುಷ್ ಆಸ್ಪತ್ರೆಗೆ ಸೇರಿದ್ದು, ಇದೇ ಜಾಗಬೇಕೆಂದರೆ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಮೂಡಿಗೆರೆ ಕ್ಷೇತ್ರದಲ್ಲಿ ಕಂದಾಯ ಇಲಾಖೆಗೆ ಸೇರಿದ ಖಾಲಿ ಭೂಮಿಯನ್ನು ಪತ್ತೆ ಹಚ್ಚಿ, ಸರ್ಕಾರದಿಂದಲೇ ಲೇಔಟ್ ನಿರ್ಮಿಸಿ ಅರ್ಹ ಬಡವರನ್ನು ಗುರುತಿಸಿ ಹಂಚಬೇಕು ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.
ಸೂರಿಲ್ಲದವರಿಗೆ ನಿವೇಶನ ನೀಡುವುದು ಮೂಲ ಸೌಲಭ್ಯಗಳಲ್ಲಿ ಒಂದಾಗಿದ್ದು, ಈ ಕೆಲಸ ಶೀಘ್ರದಲ್ಲೇ ಆಗಬೇಕೆಂದು ಹೇಳಿದಾಗ, ಇದಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಗುಡಿಸಲು ತೆರವು ಸಂದರ್ಭದಲ್ಲಿ ವಶಕ್ಕೆ ತೆಗೆದುಕೊಂಡಿದ್ದ ಆಹಾರ ಧಾನ್ಯವನ್ನು ವಾಪಸ್ ಕೊಡಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement