ವಿದ್ಯುತ್ ಅವ್ಯವಸ್ಥೆ: ಗ್ರಾಹಕರ ಪರದಾಟ
ಶೃಂಗೇರಿ: ಕಳೆದೆರೆಡು ಹಗಲು ರಾತ್ರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದ್ದರಿಂದ ಗ್ರಾಹಕರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
ಕುಡಿಯುವ ನೀರು ಸೇರಿದಂತೆ ಅಗತ್ಯ ಕೆಲಸಗಳಿಗೆ ಪರದಾಡುವಂತಾಯಿತು. ಕಳೆದ ಕೆಲ ದಿನಗಳಿಂದ ಪದೇ ಪದೇ ಅನಿಯಮಿತ ವಿದ್ಯುತ್ ಕಡಿತ ಉಂಟಾಗುತ್ತಿತ್ತು.
ಗಾಳಿಯ ಅಬ್ಬರ ಕಡಿಮೆಯಾಗಿದ್ದರೂ ಮರಗಳು ವಿದ್ಯುತ್‌ಲೈನ್ ಮೇಲೆ ಉರುಳಿ ಬೀಳುತ್ತಿವೆ. ಅನಿಯಮಿತ ವಿದ್ಯುತ್ ಕಡಿತದ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಹಗಲು ರಾತ್ರಿ ವಿದ್ಯುತ್ ಕಡಿತಗೊಳ್ಳುತ್ತಿದೆ.
ಮಳೆ ಗಾಳಿ, ವಿದ್ಯುತ್ ಕಣ್ಣಾ ಮುಚ್ಚಾಲೆಗಳ ನಡುವೆ ಗ್ರಾಹಕರ ಪರದಾಟ ನಿರಂತರವಾಗಿದೆ.
ಕ್ಷೀಣಿಸಿದ ಮಳೆ: ಅಡಕೆಗೆ ವ್ಯಾಪಕ ಕೊಳೆ
ಶೃಂಗೇರಿ: ತಾಲೂಕಿನಾದ್ಯಂತ ಮಳೆಯ ಅಬ್ಬರ ಕಡಿಮೆಯಾಗಿದ್ದು ಅಡಕೆ ಬೆಳೆಗೆ ವ್ಯಾಪಕ ಕೊಳೆ ರೋಗ ತಗುಲಿದ್ದು ಬಹುತೇಕ ಅಡಕೆ ಬೆಳೆ ನಾಶವಾಗಿದೆ.
ಈಗಾಗಲೇ ಹಳದಿ ಎಲೆ ರೋಗಕ್ಕೆ ಸಾಕಷ್ಟು ತೋಟಗಳು ಬಲಿಯಾಗಿತ್ತು. ಉಳಿದ ತೋಟಗಳು ಈ ಭಾರಿಯ ಮಳೆಗಾಳಿಯ ಅಬ್ಬರಕ್ಕೆ ಸಿಲುಕಿ ಫಸಲು ಸಹಿತ ಅಡಕೆ ಮರಗಳು ಧರೆಗುರುಳಿವೆ. ಇನ್ನುಳಿದ ಮರಗಳು ಕೊಳೆರೋಗಕ್ಕೆ ತುತ್ತಾಗಿವೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು ಆತಂಕಕ್ಕೊಳಗಾಗಿದ್ದಾರೆ.
ಮಳೆ ಕ್ಷೀಣಿಸಿದ್ದರಿಂದ ಅಡಕೆ ತೋಟಗಳಿಗೆ ಔಷದ ಸಿಂಪಡಣೆ ಕಾರ್ಯ, ಬತ್ತದ ನಾಟಿ ಕೆಲಸ ಭರದಿಂದ ಸಾಗಿದೆ. ಗುರುವಾರ ಸಂಜೆಯವರೆಗೂ ಮಳೆಯ ಪ್ರಮಾಣ ಕಡಿಮೆಯಾಗಿತ್ತು.