ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿಶ್ವಕರ್ಮ ಜನಾಂಗ ಶೈಕ್ಷಣಿಕವಾಗಿ ಬೆಳೆಯಲಿ

Lingaraj Badiger
Updated On : 23 Aug 2013, 10:52 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಆ.22
ತಲತಲಾಂತರದಿಂದ ಸರ್ಕಾರಗಳ ನಿರ್ಲಕ್ಷ್ಯಕ್ಕೊಳಗಾಗಿ ಮೂಲೆಗುಂಪಾಗಿರುವ  ವಿಶ್ವಕರ್ಮ ಸಮುದಾಯ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಆ ವರ್ಗದ ಜನ ಶೈಕ್ಷಣಿಕ ಮತ್ತು ರಾಜಕೀಯವಾಗಿ ಬೆಳೆಯಬೇಕು ಎಂದು ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕಿರುತೆರೆ ನಿರ್ಮಾಪಕ ಕೆ.ಪಿ. ನಂಜುಂಡಿ ಸಲಹೆ ಮಾಡಿದ್ದಾರೆ.
ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಭಾ ನಗರದ ಸಂಘದ ನಿವೇಶನದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ವಿಶ್ವಕರ್ಮ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತಂತ್ರ ಬದುಕು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪೈಕಿ ಎರಡನೇ ಸ್ಥಾನದಲ್ಲಿದ್ದು 35 ಲಕ್ಷ ಜನ ಸಂಖ್ಯೆಯನ್ನು ಹೊಂದಿರುವ ವಿಶ್ವಕರ್ಮ ಸಮಾಜ ನಾಡು ಮತ್ತು ರಾಷ್ಟ್ರದ ಅಭಿವೃದ್ಧಿಗೆ ತನ್ನದೇ ಆದ ಮಹತ್ತರ ಕೊಡುಗೆಗಳನ್ನು ನೀಡಿದೆ. ಆ ವರ್ಗದ ಕೊಡುಗೆಗಳನ್ನು ಸರ್ಕಾರಗಳು ಸಮರ್ಪಕವಾಗಿ ಬಳಸಿಕೊಂಡಿವೆಯೇ ಹೊರತು ಆ ಸಮುದಾಯಕ್ಕೆ ಯಾವುದೇ ಸವಲತ್ತುಗಳನ್ನು ನೀಡದೇ ಇಂದಿಗೂ ಅತಂತ್ರವಾಗಿಯೇ ಬದುಕುವಂತೆ ಮಾಡಿದೆ ಎಂದು ವಿಷಾದಿಸಿದರು.
ತಮ್ಮ ವೃತ್ತಿಯನ್ನೇ ನಂಬಿ ಬದುಕುತ್ತಿರುವ ವಿಶ್ವಕರ್ಮರಿಗೆ ಬೇರೆ ಯಾವುದೇ ಉದ್ಯೋಗಗಳು ಗೊತ್ತಿಲ್ಲ. ಇದರಿಂದಾಗಿ ಆ ವರ್ಗದ ಜನ ಬದಲಿ ವೃತ್ತಿ ಅಥವಾ ಪರ್ಯಾಯ ಮಾರ್ಗವಿಲ್ಲದೇ ಬಡತನದಲ್ಲೇ ಬದುಕುತ್ತಿದ್ದಾರೆ  ಎಂದರು.
ನಾಯಕನನ್ನು ಸೃಷ್ಟಿಸಿ: ಹಕ್ಕು ಮತ್ತು ಸವಲತ್ತುಗಳಿಗೆ ನಿರೀಕ್ಷಿಸುವುದನ್ನು ಸಮುದಾಯ ಬಿಡಬೇಕು. ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಸವಾಲಾಗಿ ಸ್ವೀಕರಿಸಿ ರಾಜಕೀಯವಾಗಿ ಗುರುತಿಸಿಕೊಳ್ಳಬೇಕು. ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಎಲ್ಲಾ ಹೋಬಳಿಗಳಲ್ಲೂ ಜನಾಂಗದ ನಾಯಕರನ್ನು ಬೆಳೆಸಬೇಕು. 50 ಜನ ವಿಶ್ವಕರ್ಮರು ಇದ್ದ ಜಾಗದಲ್ಲಿ ನಾಯಕನೊಬ್ಬನನ್ನು ಸೃಷ್ಟಿಸಬೇಕು. ಜನಾಂಗದ ಜನರನ್ನು ಶಾಸಕರು ಮತ್ತು ಸಂಸದರನ್ನಾಗಿ ಮಾಡಬೇಕು. ಸಮುದಾಯದ ಯುವಕರನ್ನು ಬೆಳೆಸಿ ಅವರಿಗೆ ಸ್ಥಾನಮಾನ ಮತ್ತು ಜವಾಬ್ದಾರಿಯನ್ನು ನೀಡಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜಿ.ಟಿ. ರತ್ನಾಕರ ಪುರೋಹಿತ್, ನಗರದ ಸಂಘದ ನಿವೇಶನದಲ್ಲಿ ಎರಡು ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಸಂಘದ ಕಟ್ಟಡ ಈಗಾಗಲೇ ಆರ್.ಸಿ.ಸಿ. ಹಂತಕ್ಕೆ ಬಂದಿದ್ದು ಅದನ್ನು ಪೂರ್ತಿ ಮಾಡಲು ಅಗತ್ಯವಾದ ಹಣವನ್ನು ಸರ್ಕಾರದಿಂದ ಒದಗಿಸಿಕೊಡುವಂತೆ ನಂಜುಂಡಿ ಅವರಿಗೆ ಮನವಿ ಮಾಡಿದರು.
ಸಾಹಿತಿ ಚಟ್ನಳ್ಳಿ ಮಹೇಶ್, ಕಟ್ಟಡ ನಿರ್ಮಾಣ ಸಲಹಾ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್, ರತ್ನಗಿರಿ ಕಾಳಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಬಿ. ನಾಗರಾಜ್, ಜಿಲ್ಲಾ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಶಾರದಾ ವೆಂಕಟೇಶ್, ಮೂಡಿಗೆರೆ ಅಧ್ಯಕ್ಷ ಜಿ.ಡಿ. ಮಂಜುನಾಥ ಆಚಾರ್, ಜನಾಂಗದ ಹಿರಿಯರಾದ ಚಂದ್ರಾಚಾರ್ ಉಪಸ್ಥಿತರಿದ್ದರು. ಹೆಚ್.ಆರ್. ಉಮಾಶಂಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಧರ್ ಸ್ವಾಗತಿಸಿದರು. ರುದ್ರಾಚಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement