ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಆಧುನಿಕತೆಯಿಂದ ಸಂಸ್ಕೃತಿ ಮರೆಯಾಗುತ್ತಿದೆ'

Lingaraj Badiger
Updated On : 2 Dec 2013, 11:32 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ. 1
ಆಧುನೀಕರಣದ ಪ್ರಭಾವಕ್ಕೆ ಒಳಗಾಗಿ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮರೆಯುತ್ತಿದ್ದು, ನಮ್ಮ ಶಿಕ್ಷಣ ವ್ಯವಸ್ಥೆಯೂ ಪರೀಕ್ಷೆಯ ಅಂಕಗಳಿಗಷ್ಟೇ ಸೀಮಿತವಾಗಿದೆ ಎಂದು ಡಾ. ಜೆ.ಪಿ. ಕೃಷ್ಣೇಗೌಡ ವಿಷಾದಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಉದ್ಭವ ಪ್ರಕಾಶನ ಮತ್ತು ಕನ್ನಂಬಾಡಿ ಕುಟುಂಬ ಇತ್ತೀಚೆಗೆ ಏರ್ಪಡಿಸಿದ್ದ ಬಿ. ನಂಜಮ್ಮ ವಿರಚಿತ ಸಂಪ್ರದಾಯ ದರ್ಶಿನಿ ಕೃತಿ ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರೊಂದಿಗೆ ಮನೆಯವರೆಲ್ಲ ಸೇರಿ ಜೀವನಾನುಭವ ಪಡೆಯುವ ಪರಿಸರವೇ ಇಲ್ಲವಾಗಿದೆ. ಆಚರಣೆಗಳು ಕೇವಲ ಯಾಂತ್ರಿಕವಾಗಿ ಬಲವಂತದ ಕ್ರಮವಾಗಿವೆ. ಇಂತಹ ಸನ್ನಿವೇಶದಲ್ಲಿ ನಂಜಮ್ಮನವರು ನಮ್ಮ ಪರಂಪರೆಯನ್ನು ತಿಳಿಸುವ ಸತ್ಕಾರ್ಯ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ಸಂಪ್ರದಾಯ ದರ್ಶಿನಿಯಲ್ಲಿ ಎರಡು ಭಾಗಗಳಿವೆ. ಮೊದಲನೆಯದ್ದು, ಪರಂಪರೆಯಿಂದ ಬಂದಿರುವ ರೂಢಿ, ಸಂಪ್ರದಾಯಗಳ ಆಚರಣೆ, ಸಿದ್ಧತೆ ಬಗ್ಗೆ ಮಾಹಿತಿ ನೀಡಿದರೆ, ಮತ್ತೊಂದು ಭಾಗ ಹಬ್ಬ ಮತ್ತು ವಿಶೇಷ ಆಚರಣೆಗಳನ್ನು ವಿವರವಾಗಿ ತಿಳಿಸಿಕೊಡುತ್ತದೆ. ಕಿರಿಯರಿಗೆ ಇದೊಂದು ಉತ್ತಮ ಮಾರ್ಗದರ್ಶಿ ಕೈಪಿಡಿ ಎಂದು ಸೂಚಿಸಿದರು.
ಸಂಪ್ರದಾಯ ದರ್ಶಿನಿ ಕೃತಿಯನ್ನು ಲೋಕಾರ್ಪಣೆ ಮಾಡಿದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಸಂಪ್ರದಾಯಗಳೆಲ್ಲವನ್ನೂ ಗಾಳಿಗೆ ತೂರಿ ಫ್ಯಾಷನ್ ಯುಗವಾಗಿ ಪರಿವರ್ತಿಸುತ್ತಿರುವ ನಾವು ನಂಜಮ್ಮನವರಂಥ ಹಿರಿಯರಿಂದ ಬಹಳಷ್ಟು ಕಲಿಯಬೇಕಿದೆ. ಹಣದ ಹಿಂದೆ ಓಡುತ್ತಿರುವುದರ ಪರಿಣಾಮವಾಗಿ ವಿವಾಹ ವಿಚ್ಚೇದನಗಳು ಹೆಚ್ಚುತ್ತಿವೆ. ಪ್ರತಿ ಆಚರಣೆಗೂ ವಿಚಾರದ ಹಿನ್ನೆಲೆ ಇದೆ ಎಂದರು.
ನಮ್ಮ ಸಂಸ್ಕೃತಿಯ ಬೇರು ಸಂಪ್ರದಾಯಗಳಲ್ಲಿ ಅಡಗಿದೆ ಎಂದ ಅವರು, ಇಂದಿನವರಿಗೆ ಅದರ ಅರ್ಥವೇ ತಿಳಿಯುತ್ತಿಲ್ಲ. ಪುರಾತನ ಕಲೆ, ಸಂಸ್ಕೃತಿಯ ಪರಿಚಯವಾಗಬೇಕು. ಅಂಥ ಪ್ರಯತ್ನ ಸಂಪ್ರದಾಯ ದರ್ಶಿನಿಯಲ್ಲಿ ದಾಖಲಾಗಿದೆ ಎಂದು ಹೇಳಿದರು. ನಂಜಮ್ಮ ಮಾತನಾಡಿ, ನಮ್ಮ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಒಂದು ಪ್ರಯತ್ನ ತಮ್ಮ ಕೃತಿಯ ಹಿಂದಿನ ಉದ್ದೇಶ ಎಂದರು.
ಸಾಹಿತಿ ಬೆಳವಾಡಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಫಿ ಮಂಡಳಿಯ ಶ್ರೀನಿವಾಸಮೂರ್ತಿ, ವಾಣಿಜ್ಯೋದ್ಯಮಿ ಸಿದ್ದು ಉಪಸ್ಥಿತರಿದ್ದರು. ಡಿ.ಎಚ್. ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ರಾಮಮೂರ್ತಿ ಸ್ವಾಗತಿಸಿದರು, ಸುಮಾ ರಾಮಮೂರ್ತಿ ವಂದಿಸಿದರು. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement