ಇಂದು ಪ್ರತಿಭಟನೆ
ಶೃಂಗೇರಿ: ಶೃಂಗೇರಿ ತಾಲೂಕು ಕಚೇರಿ ಎದುರು ಸೋಮವಾರ ತಾಲೂಕು ರೈತ ಸಂಘ, ರೈತಪರ ಸಂಘಟನೆಗಳು ಗೋರಕ್ ಸಿಂಗ್ ವರದಿ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಧರಣಿ ಸತ್ಯಾಗ್ರಹ ಆಯೋಜಿಸಿದೆ. ಬೆಳಿಗ್ಗೆ 11 ಗಂಟೆಯಿಂದ ಧರಣಿ ಆರಂಭವಾಗಲಿದೆ. ಬೆಳಗಾವಿಯಲ್ಲಿ ಧರಣಿ ನಿರತ ಕಬ್ಬು ಬೆಳೆಗಾರ ವಿಠಲ್ ಅರಬಾವಿಯವರಿಗೆ ಶ್ರದ್ಧಾಂಜಲಿ ಸಭೆಯು ನಡೆಯಲಿದೆ. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮವಿದೆ.
ಬೀಳ್ಕೊಡುಗೆ
ಚಿಕ್ಕಮಗಳೂರು: ವಾರ್ತಾ ಇಲಾಖೆ ವಾಹನ ಚಾಲಕ ಬಸವರಾಜು ರವರಿಗೆ ನಿವೃತ್ತಿಯಾದ ಹಿನ್ನೆಲೆಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ ಮಾತನಾಡಿ, ಬಸವರಾಜು ರವರು ಕಳೆದ 30 ವರ್ಷಕ್ಕೂ ಹೆಚ್ಚಿನ ಕಾಲ ವಾರ್ತಾ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಹೊಂದುವುದು ಸಾಮಾನ್ಯ, ಬಸವರಾಜ್ ಅವರು ನಿವೃತ್ತಿಯಾಗಿದ್ದರೂ ಸಹ ಇನ್ನೂ ಹೆಚ್ಚಿನ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು. ಬಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹೇಮಪ್ಪ ವಂದಿಸಿದರು. ಇದೇ ಸಂದರ್ಭದಲ್ಲಿ ಬಸವರಾಜು ರವರನ್ನು ಸನ್ಮಾನಿಸಲಾಯಿತು.
ಇಂದು ಕಿಗ್ಗಾದಲ್ಲಿ ದೀಪೋತ್ಸವ
ಶೃಂಗೇರಿ: ತಾಲೂಕಿನ ಮರ್ಕಲಲ್ಪಂಚಾಯಿತಿ ವ್ಯಾಪ್ತಿಯಲ್ಲಿನ ಮಳೆ ದೇವರು ಕಿಗ್ಗಾ ಶ್ರೀಋಷ್ಯ ಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ಸೀಮೆ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.
ದೀಪೋತ್ಸವದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಇದೇ ದಿನ ಮಳೆ, ಬೆಳೆ ಸಮೃದ್ಧಿಗಾಗಿ ನೆಮ್ಮಾರು ಸೀಮೆಯ ರುದ್ರ ಹೋಮವು ನಡೆಯಲಿದೆ. ಹೆಚ್ಚಿನ ಸಂಖೆಯಲ್ಲಿ ಭಕ್ಕಾದಿಗಳು ದೀಪೋತ್ಸವದಲ್ಲಿ ಪಾಲ್ಗೊಳಬೇಕೆಂದು ಕೋರಲಾಗಿದೆ.