ದೃಶ್ಯ ಮಾಧ್ಯಮ ಉತ್ತಮ ಸಂದೇಶ ನೀಡಲಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.1
ದೃಶ್ಯ ಮಾಧ್ಯಮಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಅಗತ್ಯತೆ ಇದೆ ಎಂದು ಕೆಎಸ್ಸಾರ್ಟಿಸಿ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ವಾಸು ಹೇಳಿದರು.
ನಗರದ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ಪರಿಣಾಮಕಾರಿಯಾದ ಸಿನಿಮಾ ಮತ್ತು ದೃಶ್ಯ ಮಾಧ್ಯಮಗಳು ಕೆಟ್ಟದನ್ನು ಬಿಂಬಿಸುವುದನ್ನು ಬಿಟ್ಟು ಒಳ್ಳೆಯ ಸಂದೇಶ ಸಾರುವ ಕೆಲಸ ಮಾಡಬೇಕಾದ ಅವಶ್ಯವಿದೆ ಎಂದ ಅವರು, ಅಂದು ರಾಜ್‌ಕುಮಾರ್ ಅವರ ಸಿನಿಮಾ ನೋಡಿ ಒಲವು, ಗೆಲವು ಮತ್ತು ಚಿತ್ರದ ಸಂದೇಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಬದುಕಲು ಪ್ರೇರಣೆಯಾಗಿತ್ತು. ಆದರೆ, ಇಂದಿನ ಸಿನಿಮಾಗಳು ನೋಡಿದರೆ ಮನಸ್ಸಿನ ನೆಮ್ಮದಿ ಹಾಳಾಗುವ ಪರಿಸ್ಥಿತಿ ಬಂದಿದೆ ಎಂದು ವಿಷಾದಿಸಿದರು.
ಜ್ಞಾನ ಬೆಳೆಯಲು ಪುಸ್ತಕ ಭಂಡಾರ ಅಗತ್ಯ. ಕವಿಗಳು, ಸಾಹಿತಿಗಳು ಮತ್ತು ಪಂಡಿತರ ಕೃತಿಗಳನ್ನು ಓದಬೇಕು. ಪುಸ್ತಕ, ಸಾಹಿತ್ಯ, ಕನ್ನಡಾಭಿಮಾನಿಗಳಿಂದ ಮಾತ್ರ ನಮ್ಮ ಸಂಸ್ಕೃತಿ ಜೀವಂತವಾಗಿದೆ ಎಂದರು.
ಹರಿದು ಹಂಚಿಹೋಗಿದ್ದ ರಾಜ್ಯವನ್ನು ಹೋರಾಟದ ಮೂಲಕ ಕರ್ನಾಟಕ ಏಕೀಕರಣವಾಗಿ ಕನ್ನಡಕ್ಕೆ ಮಾನ್ಯತೆ ದಕ್ಕಿದೆ. ರಾಜ್ಯಾದ್ಯಂತ ನವೆಂಬರ್‌ಗೆ ಸೀಮಿತವಾಗಿರುವ ಕನ್ನಡದ ಹಬ್ಬ ನಿತ್ಯೋತ್ಸವವಾಗಿ ಬೆಳಗಬೇಕಾದರೆ ಅನ್ಯ ಭಾಷಾ ವ್ಯಾಮೋಹ ಬಿಟ್ಟು ಮಾತೃಭಾಷೆ ಪ್ರೀತಿಸಬೇಕಾದ ಅವಶ್ಯವಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎನ್.ಎಸ್. ಶಿವಸ್ವಾಮಿ ಮಾತನಾಡಿ, ಕನ್ನಡ ಅತಿ ಶ್ರೀಮಂತ ಭಾಷೆ. ಅದನ್ನು ಮಾತನಾಡಲು ಕೀಳರಿಮೆ ಏಕೆ ಎಂದು ಪ್ರಶ್ನಿಸಿದ ಅವರು, ಮಕ್ಕಳಿಂದಲೇ ಕನ್ನಡ ವ್ಯಾಮೋಹ ಬೆಳೆಸಿದರೆ ಸಂಪದ್ಭರಿತ ರಾಜ್ಯವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಕನ್ನಡಕ್ಕೆ ಹೆಚ್ಚು ಮನ್ನಣೆ ಕೊಟ್ಟ 8 ಜನ ಸಂಸ್ಥೆಯ ಸಿಬ್ಬಂದಿಗೆ ಗೌರವಿಸಿ ಪುರಸ್ಕರಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷರಾದ ನಟರಾಜ್, ಅಶೋಕ್, ಘಟಕ ವ್ಯವಸ್ಥಾಪಕ ಬಿ.ಎಸ್. ರಮೇಶ್, ಪ್ರಸನ್ನಕುಮಾರ್, ಗುರುವೇಶ್ ಉಪಸ್ಥಿತರಿದ್ದರು.
ಹೊಳೆಹೊದ್ದು ದೀಪೋತ್ಸವ
ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ವ್ಯಾಪ್ತಿಯ ಯಡದಳ್ಳಿಯ ಹೊಳೆಹೊದ್ದು ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ದೀಪೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.