ನೀರು ನಿರ್ವಹಣೆ ಲೋಪಕ್ಕೆ ಸ್ಪಷ್ಟನೆ
ಬೀರೂರು: ಸಮರ್ಪಕವಾಗಿ ಸಣ್ಣ ಹಿಡುವಳಿದಾರರಿಗೆ ನೀರು ಸಿಗಬೇಕೆಂಬ ಆಶಯದಿಂದಲೇ ನೀರು ಬಳಕೆದಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಮದಗದಕೆರೆ ನೀರು ನಿರ್ವಹಣೆಯಲ್ಲಿ ಉಂಟಾಗಿರುವ ಲೋಪಕ್ಕೆ ಸಂಘವನ್ನು ಗುರಿ ಮಾಡುತ್ತಿರುವುದು ನೋವುಂಟು ಮಾಡಿದೆ ಎಂದು ಅಡಕೆ ಬೆಳೆಗಾರರ ಸಂಘಧ ಅಧ್ಯಕ್ಷ ಎ.ಆರ್. ಕಾಂತರಾಜ್ ಹೇಳಿದರು.
ಅಡಕೆ ಬೆಳೆಗಾರರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಉಪ ವಿಭಾಗಾಧಿಕಾರಿಗಳು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆದ ಜಿ. ಅನುರಾಧ ಅವರ ಸಮ್ಮುಖದಲ್ಲಿ ನಡೆದ ಕಡೂರು ತಾಲೂಕು ನೀರಾವರಿ ಸಮಿತಿ ಸಭೆಯಲ್ಲಿ ಹೊಸ ಮದಗದಕೆರೆಯಿಂದ ಬತ್ತದ ಬೆಳೆಗೆ ಪ್ರತಿ ಬಾರಿಯಂತೆ ಈ ಸಲವೂ 20 ಅಡಿ ನೀರು ಕೊಡಲು ತೀರ್ಮಾನಿಸಲಾಗಿದೆ. ಕೆರೆಯ ನಾಲೆಯಿಂದ ಅನಧಿಕೃತ ಪಂಪ್ಸೆಟ್ಗಳ ಮೂಲಕ ನೀರು ಹಾಯಿಸಿಕೊಳ್ಳುತ್ತಿರುವುದನ್ನು ತಡೆಗಟ್ಟುವಲ್ಲಿ ಸಣ್ಣ ನೀರಾವರಿ ಇಲಾಖೆ, ಆರಕ್ಷಕ ಸಿಬ್ಬಂದಿ ಸಹಕಾರ ಪಡೆದು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಅಡಕೆ ಬೆಳೆಗಾರರ ಸಂಘದ ಖಜಾಂಚಿ ಎಂ. ಸೋಮಶೇಖರ್ ಮಾತನಾಡಿದರು. ಸಿ.ಎಂ. ಚಂದ್ರಶೇಖರ್, ಶಿವಪ್ರಸಾದ್, ಪ್ರಧಾನ ಕಾರ್ಯದರ್ಶಿ ಡಿ.ಆರ್.ರಮೇಶ್, ಷಡಾಕ್ಷರಿ ಇದ್ದರು.