ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಕ್ತದಾನದಿಂದ ಆರೋಗ್ಯ ವೃದ್ಧಿ: ಸತೀಶ್

Lingaraj Badiger
Updated On : 2 Dec 2013, 11:39 am

ಬಾಳೆಹೊನ್ನೂರು: ರಕ್ತಕ್ಕೆ ಪರ್ಯಾಯ ವಸ್ತು ಬೇರೆ ಯಾವುದೂ ಇಲ್ಲ. ಈ ಹಿನ್ನೆಲೆಯಲ್ಲಿ ರಕ್ತದಾನ ಮಾಡುವುದರಿಂದ ಜನರ ಜೀವ ಉಳಿದು ಬಹುಪುಣ್ಯ ಲಭಿಸುತ್ತದೆ ಎಂದು ಶಿವಮೊಗ್ಗ ರೋಟರಿ ರಕ್ತನಿಧಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಕೆ. ಸತೀಶ್ ಹೇಳಿದ್ದಾರೆ.
ಇಲ್ಲಿನ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ಹಾಗೂ ಶಿವಮೊಗ್ಗ ಮಿಡ್‌ಟೌನ್ ರೋಟರಿ ಪೌಂಡೇಶನ್ ವತಿಯಿಂದ ಭಾನುವಾರ ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ವಿಶ್ವ ಏಡ್ಸ್ ಜನಜಾಗೃತಿ ದಿನಾಚರಣೆಯ ಅಂಗವಾಗಿ ಜಾಗೃತಿ ಮೂಡಿಸಲು ಈ ಶಿಬಿರವನ್ನು ಆಯೋಜಿಸಲಾಗುತ್ತದೆ. ಸ್ಥಳೀಯ ರೋಟರಿ ಸಂಸ್ಥೆಯು ಕಳೆದ 8 ವರ್ಷಗಳಿಂದ ಈ ಕಾರ್ಯವನ್ನು ನಡೆಸಿಕೊಂಡು ಬರುತ್ತದೆ ಎಂದರು.
ರೋಟರಿ ರಕ್ತನಿಧಿಯು ವರ್ಷದ ಎಲ್ಲಾ ದಿನಗಳಲ್ಲೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಸ್ವಯಂ ಸೇವಾ ಸಂಸ್ಥೆಗಳಿಂದ ಈ ರಕ್ತನಿಧಿ ಕೇಂದ್ರ ನಡೆಯುತ್ತಿದೆ. ದಾನಿಗಳಿಂದ ಪಡೆದ ರಕ್ತವನ್ನು 14 ವಿವಿಧ ಬಗೆಯ ಪರೀಕ್ಷೆಗೆ ಒಳಪಡಿಸಿ ಅಗತ್ಯವಿರುವ ವ್ಯಕ್ತಿಗೆ ನೀಡಲಾಗುತ್ತದೆ. ಇತ್ತೀಚಿನ ಸಂಶೋಧನೆ ಪ್ರಕಾರ ರಕ್ತದಾನ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ರಕ್ತ ಸಂಚನಲ ಸರಾಗವಾಗಿ ಆಗುತ್ತದೆ ಎಂದು ತಿಳಿಸಿದರು. ರೋಟರಿ ಅಧ್ಯಕ್ಷ ಎಚ್.ಎಂ. ಇಬ್ರಾಹಿಂ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಜನ್ಮ ದಿನ, ಇತರೆ ವಾರ್ಷಿಕೋತ್ಸವಗಳಂದು ರಕ್ತದಾನ ಮಾಡುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಠಾಣಾಧಿಕಾರಿ ಕೆ.ಆರ್. ರಘು ಶಿಬಿರವನ್ನು ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ದಂತವೈದ್ಯ ಡಾ. ಪ್ರೇಮ್‌ಕುಮಾರ್, ಇನ್ನರ್ ವ್ಹೀಲ್ ಕ್ಲಬ್‌ನ ವೈಶಾಲಿ ವಿ. ಕುಡ್ವ, ಕಾರ್ಯದರ್ಶಿ ವಿದ್ಯಾ ಆರ್.ಪೈ, ರೋಟರಿ ಕಾರ್ಯದರ್ಶಿ ಕೆ.ಹೆಚ್. ನಾಗೇಶ್, ರೋಟರಿ ಪೂರ್ವಾಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ, ಡಾ. ರಮೇಶ್, ಬಿ.ಸಿ. ಗೀತಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement