ಕೊಪ್ಪ; ಬತ್ತ ಖರೀದಿ ಕೇಂದ್ರ ಆರಂಭ
ಕೊಪ್ಪ: ಪಟ್ಟಣದ ವಿದ್ಯಾನಗರದಲ್ಲಿರುವ ಪಪಂ ಸಮುದಾಯ ಭವನದಲ್ಲಿ ಇತ್ತೀಚೆಗೆ ಬತ್ತ ಖರೀದಿ ಕೇಂದ್ರ ಆರಂಭಿಸಲಾಯಿತು.
ಬತ್ತ ಖರೀದಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೂಪ ಮಾತನಾಡಿ, ರೈತರಿಂದ ಸಾಮಾನ್ಯ ಬತ್ತವನ್ನು ಪ್ರತಿ ಕ್ವಿಂಟಲ್‌ಗೆ 1600 ದರದಲ್ಲಿ ಖರೀದಿಸಲಾಗುವುದೆಂದರು.
ರೈತರು ಬತ್ತ ಖರೀದಿ ಕೇಂದ್ರಕ್ಕೆ ತರುವ ಮುನ್ನ ಪಹಣಿ, ಭೂ ಹಿಡುವಳಿ ದಾಖಲೆ, ಗ್ರಾಮ ಲೆಕ್ಕಾಧಿಕಾರಿಗಳ ದೃಢೀಕರಣ, ಮತ ಗುರುತಿನ ಚೀಟಿ, ಪಡಿತರ ಚೀಟಿ, ಬ್ಯಾಂಕ್ ಖಾತೆ ಪುಸ್ತಕದ ನಕಲು ಹಾಗೂ ಬತ್ತದ ಮಾದರಿಯೊಂದಿಗೆ ಖರೀದಿ ದಿನಾಂಕ ನಿಗದಿಪಡಿಸಬೇಕು. ಜರಡಿ ಮಾಡಿದ ಉತ್ತಮ ಗುಣಮಟ್ಟದ ಬತ್ತ ನೀಡಬೇಕೆಂದ ಅವರು, ಬತ್ತದ ಗ್ರೇಡಿಂಗ್ ಪರೀಕ್ಷಿಸಿದ ನಂತರ ಖರೀದಿ ಮಾಡಲಾಗುವುದು. ಖರೀದಿಸಿದ ಬತ್ತದ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದೆಂದರು.
ಕೇಂದ್ರವನ್ನು ತಹಸೀಲ್ದಾರ್ ಶ್ರೀಧರ್ ಮೂರ್ತಿ ಪಂಡಿತ್ ಉದ್ಘಾಟಿಸಿದರು. ತಹಸೀಲ್ದಾರ್ ಕೃಷ್ಣಮೂರ್ತಿ, ಕೃಷಿ ಮಾರುಕಟ್ಟೆ ಇಲಾಖೆ ಸಹಾಯಕ ನಿರ್ದೇಶಕಿ ಶೈಲಾ, ಚಿಕ್ಕಯ್ಯ ಇದ್ದರು.