ಗೋರಕ್ ಸಿಂಗ್ ವರದಿ ಜಾರಿಗೆ ಒತ್ತಾಯಿಸಿ ಧರಣಿ
ಶೃಂಗೇರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ನಿರಂತರವಾಗಿ ಪ್ರತಿಭಟನೆ, ಧರಣಿಗಳನ್ನು ನಡೆಸುತ್ತಲೇ ಬಂದಿದ್ದರೂ ಇದುವರೆಗೆ ಯಾವುದೇ ಸರ್ಕಾರಗಳು ಸ್ಪಂದಿಸಿಲ್ಲ. ಇನ್ನಾದರೂ ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಬೆಳಗಾವಿ ರೈತನ ಆತ್ಮಹತ್ಯೆಯಂತಹ ಘಟನೆ ಮರುಕಳಿಸದಂತೆ ಎಚ್ಚೆತ್ತುಕೊಳ್ಳಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಟಿ.ಕೆ. ಗೋಪಾಲ್ ನಾಯಕ್ ತೊರೊಳ್ಳಿ ಆಗ್ರಹಿಸಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ಗೋರಕ್ ಸಿಂಗ್ ವರದಿ ಅನುಷ್ಠಾನ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಧರಣಿ ನಿರತ ಕಬ್ಬು ಬೆಳೆಗಾರ ರೈತ ವಿಠಲ್ ಅರಬಾವಿ ಆತ್ಮಹತ್ಯೆಗೆ ಸರ್ಕಾರದ ನಿರ್ಲಕ್ಷ್ಯವೇ ಹೊಣೆಯಾಗಿದೆ. ಧರಣಿ ನಿರತರ ಬೇಡಿಕೆಗಳನ್ನು ನಿರ್ಲಕ್ಷ್ಯಿಸಲಾಗಿತ್ತು. ಸರ್ಕಾರ ಗಮನ ಹರಿಸಿದರೆ ಇಂತಹ ಘಟನೆಯನ್ನು ತಪ್ಪಿಸಬಹುದಾಗಿತ್ತು. ಮಲೆನಾಡು ಭಾಗದ ರೈತರು ಅಡಕೆ ಹಳದಿ ಎಲೆ ರೋಗ, ಕೊಳೆರೋಗ, ಅತಿವೃಷ್ಟಿಯಿಂದ ಬೆಳೆ ನಾಶ, ವಿಪರೀತ ಸಾಲದಿಂದ ಸಂಕಷ್ಟಕ್ಕೊಳಗಾಗಿದ್ದು, ರೈತರ ಬದುಕು ಶೋಚನೀಯವಾಗಿದೆ. ದಿಕ್ಕು ಕಾಣದ ರೈತ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ಆದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಚುನಾವಣೆ ಪ್ರನಾಳಿಕೆಯಲ್ಲಿ ಪ್ರಕಟಿಸಿದಂತೆ ಗೋರಕ್ ಸಿಂಗ್ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು, ಹಳದಿ ಎಲೆ, ಕೊಳೆ ರೋಗ ಪರಿಹಾರ ಘೋಷಿಸಬೇಕು, ಬ್ಯಾಂಕುಗಳು ಬಲವಂತದ ಸಾಲ ವಸೂಲಾತಿ ಕ್ರಮವನ್ನು ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಡೆಯಬಹುದಾದ ರೈತರ ಎಲ್ಲಾ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಧರಣಿ ನಿರತ ರೈತರು ಗೋರಕ್ ಸಿಂಗ್ ವರದಿ ಅನುಷ್ಠಾನಕ್ಕೆ, ವಿವಿಧ ಬೇಡಿಕೆಗಳ ಈಡೇರಿಕಗೆ ಒತ್ತಾಯಿಸಿ ಘೋಷಣೆ ಕೂಗಿದರು. ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ತಹಸೀಲ್ದಾರ್ ದೇವಮ್ಮ ಮನವಿ ಸ್ವೀಕರಿಸಿ ಮಾತನಾಡಿ, ರೈತರ ಬೇಡಿಕೆಗಳನ್ನು ಕೂಡಲೇ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಬಂಡ್ಲಾಪುರ ಶ್ರೀಧರ ರಾವ್, ಮಾಗಲು ಅಚ್ಚುತ, ಕಾನೋಳ್ಳಿ ಚಂದ್ರಶೇಖರ್, ಕೆಳವಳ್ಳಿ ಗುಂಡಪ್ಪ, ಜಿ.ಎಂ. ಸುರೇಂದ್ರ,ಅಂಗುರ್ಡಿ ದಿನೇಶ್, ಸುಂದರೇಶ್ ಮತ್ತಿತರರು ಇದ್ದರು.