ಬಯಲಾಯ್ತು ರೈಲು ನಿಲ್ದಾಣ ಕಾಮಗಾರಿ ಬಣ್ಣ
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಡಿ.2
ಇಲ್ಲಿನ ನೂತನ ರೈಲು ನಿಲ್ದಾಣದ ಬಣ್ಣ ಒಂದೇ ಮಳೆಗೆ ಬಯಲಾಯ್ತು..!
ಭಾನುವಾರ ರಾತ್ರಿ ನಗರದಲ್ಲಿ ಸುಮಾರು 16 ಮಿ.ಮೀ. ಮಳೆಯಾಗಿದ್ದು, ರೈಲು ನಿಲ್ದಾಣದಲ್ಲಿ ಸುರಿದ ಮಳೆ ತರಾತುರಿಯಲ್ಲಿ ಮಾಡಲಾದ ಕಾಮಗಾರಿಯ ಗುಣಮಟ್ಟವನ್ನು ಹೊರಹಾಕಿದೆ.
ನಿಲ್ದಾಣದಲ್ಲಿ ತಡೆ ಗೋಡೆಯ ಸುರಕ್ಷತೆಗಾಗಿ ಹಾಕಲಾಗಿರುವ ಮಣ್ಣು ಮಳೆ ನೀರಿನ ರಭಸಕ್ಕೆ ಜಾರಿ ಹೋಗಿದೆ. ಒಂದೆಡೆ ಅಲ್ಪಸ್ವಲ್ಪವಾಗಿದ್ದರೆ ಗಂಭೀರವೇನೂ ಅನಿಸುತ್ತಿರಲಿಲ್ಲ. ಆದರೆ, ಹಲವೆಡೆ ಮಣ್ಣು ಕುಸಿದಿದೆ. ಇದು ರೇಲ್ವೆ ಕಾಮಗಾರಿಯ ಗುಣಮಟ್ಟ ಪ್ರಶ್ನಿಸುವಂತಿದೆ.
ಏನೆಲ್ಲಾ ಆಗಿದೆ? : ಚಿಕ್ಕಮಗಳೂರಿಗೆ ರೈಲು ಬರಬೇಕೆಂಬುದು 8 ದಶಕದ ಕನಸು. ಕಳೆದ ನ. 19ರಂದು ನನಸಾಯಿತು. ಇದು, ಚಿಕ್ಕಮಗಳೂರು ಜಿಲ್ಲೆಯ ಪಾಲಿಗೆ ಐತಿಹಾಸಿಕ ದಿನ.
ನ. 19ರಿಂದ ಪ್ರತಿನಿತ್ಯ ಪ್ಯಾಸೆಂಜರ್ ರೈಲು ಚಿಕ್ಕಮಗಳೂರು- ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುತ್ತಿದೆ. ದಿನ ದಿನಕ್ಕೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಿದರೆ ಇನ್ನಷ್ಟು ಅನುಕೂಲವಾಗಲಿದೆ.
ಚಿಕ್ಕಮಗಳೂರಿಗೆ ರೈಲು ಬಂತು. ಆದರೆ, ರೈಲು ನಿಲ್ದಾಣ ಕಾಮಗಾರಿ ಅಲ್ಲಲ್ಲಿ ಕಳಪೆಯಾಗಿರುವುದು ಕಂಡು ಬಂದಿದೆ. ರೇಲ್ವೆ ಸಂಪರ್ಕ ಉದ್ಘಾಟನೆಯ ದಿನ ಸಮೀಪಿಸುತ್ತಿದ್ದಂತೆ ತೀವ್ರ ಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಇದೀಗ ಮಂದಗತಿಯಲ್ಲಿ ನಡೆಯುತ್ತಿರುವುದು ನೋಡಿದರೆ, ಈ ನಿಲ್ದಾಣದ ಮುಂದಿನ ಪರಿಸ್ಥಿತಿ ಏನೆಂಬ ಪ್ರಶ್ನೆ ಎದುರಾಗಿದೆ.
ರೈಲು ನಿಲ್ದಾಣದ ಪ್ಲಾಟ್ ಫಾರಂಗೆ ಸರಿ ಹೊಂದುವಂತೆ ಮಣ್ಣು ಹಾಕಿ, ಅದಕ್ಕೆ ತಡೆಗೋಡೆಯನ್ನೂ ಹಾಕಿ, ಹುಲ್ಲಿನ ಹಾಸು ಹಾಕಲಾಗಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ಈ ಭಾಗದಲ್ಲಿ ಮಣ್ಣು ಕುಸಿದಿದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡದೆ ಇರುವುದರಿಂದ ಈ ಅವಾಂತರ ನಡೆದಿದ್ದು, ಮಣ್ಣು ಕುಸಿದ ಮೇಲೆ ಬೆರಳೆಣಿಕೆಯಷ್ಟು ಕೂಲಿ ಕಾರ್ಮಿಕರನ್ನು ಬಿಟ್ಟು ಚರಂಡಿ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳಲಾಗಿದೆ.
ಮಣ್ಣು- ಕಸ: ಈ ರೈಲು ಮಾರ್ಗ ಲೋಕಾರ್ಪಣೆಗೊಂಡು ಇಂದಿಗೆ 13 ದಿನಗಳು ಕಳೆದಿವೆ. ಈ ನಿಲ್ದಾಣದಲ್ಲಿ ರೇಲ್ವೆ ಇಲಾಖೆ ಸ್ಟೇಷನ್ ಮಾಸ್ಟರ್ ಹಾಗೂ ಸಹಾಯಕರೊಬ್ಬರನ್ನು ನೇಮಿಸಿದೆ. ಇನ್ನುಳಿದಂತೆ ಬೇರೆ ಕೆಲಸಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿಲ್ಲ.
ರೇಲ್ವೆ ನಿಲ್ದಾಣದಲ್ಲಿ ಹಲವೆಡೆ ಕಸ ಬಿದ್ದಿದೆ. ಅಲ್ಲಲ್ಲಿ ಮಳೆಯ ನೀರು ನಿಂತಿದೆ. ಕಳೆದ 13 ದಿನಗಳಿಂದ ಒಂದು ದಿನವೂ ಇಲ್ಲಿನ ಕಸ ಗುಡಿಸುವ ಕೆಲಸ ಆಗಿಲ್ಲ. ಪ್ರಯಾಣಿಕರು ತಿಂದು ಹಾಕಿದ ತಿಂಡಿಯ ಪ್ಲಾಸ್ಟಿಕ್‌ಗಳು ನಿಲ್ದಾಣದ ಒಳ ಭಾಗದಲ್ಲಿ ಬಿದ್ದಿವೆ. ಶೌಚಾಲಯ ನಿರ್ಮಾಣದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಬೆಂಕಿ ನಂದಿಸಲು ರೇಲ್ವೆ ನಿಲ್ದಾಣದಲ್ಲಿ ಮರಳು ತುಂಬಿದ ಬಕೆಟ್‌ಗಳನ್ನು ಇಡಲಾಗಿದೆ. ಇದರಲ್ಲಿ ಒಂದು ಬಕೆಟ್ ಖಾಲಿ ಇದ್ದರೆ, ಇನ್ನೊಂದು ಬಕೆಟ್‌ನಲ್ಲಿ ನೀರು ತುಂಬಿದೆ.
ರೈಲು ಲೋಕಾರ್ಪಣೆ ಮಾಡಲೇಬೇಕು ಎಂಬ ತರಾತುರಿಯಲ್ಲಿ ಕೆಲವು ಕಾಮಗಾರಿ ಮಾಡಿ ಮುಗಿಸಿ, ಬಾಕಿ ಉಳಿದಿರುವ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದಂತಿದೆ. ರೈಲು ಲೋಕಾರ್ಪಣೆ ಮಾಡಿ ಕೈ ತೊಳೆದುಕೊಂಡಿರುವ ರೈಲ್ವೆ ಇಲಾಖೆ ಶುಚಿತ್ವ, ನಿರ್ವಹಣೆ ಹಾಗೂ ಮುಂದುವರೆದ ಕಾಮಗಾರಿ ಬಗ್ಗೆ ಗಮನ ಹರಿಸಬೇಕು.
ಮೂಲ ಸೌಕರ್ಯ ಕೊರತೆ
ಹೊಸ ರೈಲು ನಿಲ್ದಾಣ ನೋಡಲು ನಗರದ ಜನ ಬಂದು ಹೋಗುತ್ತಿದ್ದಾರೆ. ಇಲ್ಲಿ ಬಿದ್ದಿರುವ ಕಸ ಮತ್ತು ಮಣ್ಣನ್ನು ನೋಡಿ, ಇದೇ ಪರಿಸ್ಥಿತಿ ಮುಂದುವರಿದರೆ ನಿಲ್ದಾಣ ಕಸದಿಂದ ತುಂಬಿ ಹೋಗಲಿದೆ ಎಂದು ಹೇಳುತ್ತಿದ್ದಾರೆ. ಮೂಲ ಸೌಲಭ್ಯ ಇಲ್ಲಿ ಕುಡಿಯುವ ನೀರಿನ ಸಂಪರ್ಕ ಹೊರತು ಪಡಿಸಿದರೆ, ಇನ್ನುಳಿದಂತೆ ಯಾವುದೇ ಮೂಲ ಸೌಲಭ್ಯಗಳು ಇಲ್ಲ. ನಿಲ್ದಾಣದ ಹೊರ ಭಾಗದಲ್ಲಿ ಎರಡು ಕಡೆಗಳಲ್ಲಿ ಹೈಮಾಸ್ಟ್ ಲೈಟ್‌ಗಳನ್ನು ಹಾಕಲಾಗಿದ್ದು, ಇದರಲ್ಲಿ ಒಂದು ಕಂಬದ ಲೈಟ್‌ಗಳು ಅರ್ಧಕ್ಕೆ ಮೇಲಕ್ಕೆ ಏರಿಕೆ ಬಿಡಲಾಗಿದೆ. ಹೀಗೆ ಇಲ್ಲಿನ ಶುಚಿತ್ವ ನೋಡಿದರೆ ಅಸಹ್ಯಪಡುವಂತಿದೆ.