ಭದ್ರಾ ಅಭಯಾರಣ್ಯದಲ್ಲಿ ಹುಲಿ ಗಣತಿ
ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಇದೇ ಡಿಸೆಂಬರ್ 16 ರಿಂದ 23ರವರೆಗೆ 8 ದಿನಗಳ ಕಾಲ ಹುಲಿ ಗಣತಿಯನ್ನು ನಡೆಸಲಾಗುವುದು ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ವೆಂಕಟೇಶನ್ ಹೇಳಿದ್ದಾರೆ.
ಇದಕ್ಕಾಗಿ 180 ಮಂದಿ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡುವಾಗ ತಿಳಿಸಿದರು.
ಅಖಿಲ ಭಾರತ ಹುಲಿ ಅಂದಾಜು ಕಾರ್ಯಕ್ರಮದಡಿಯಲ್ಲಿ ಈ ಗಣತಿಯನ್ನು ನಡೆಸಲಾಗುವುದು. ಹುಲಿ ಗಣತಿ ಎಂದರೆ ಸಂಖ್ಯೆಗಳ ಎಣಿಕೆ ಮಾತ್ರವಲ್ಲ. ಹುಲಿಗಳ ಚಲನವಲನ ಗಮನಿಸುವುದು, ಭೇಟಿಯಾಡುವ ಮಾಂಸಾಹಾರಿ ಪ್ರಾಣಿಗಳು ಮತ್ತು ಸಸ್ಯಹಾರಿ ಪ್ರಾಣಿಗಳ ವಾಸ್ತವ್ಯ ಇವೆಲ್ಲವೂ ಗಣತಿ ಒಳಗೊಂಡಿದೆ ಎಂದು ಹೇಳಿದರು.
8 ದಿನಗಳ ಗಣತಿಯಲ್ಲಿ ಮೊದಲ ಎರಡು ದಿನ ಗಣತಿಗೆ ಸಿದ್ದತೆ ಮಾಡಿಕೊಳ್ಳಲಾಗುವುದು. ನಂತರದ ಮೂರು ದಿನ ಮಾಂಸಾಹಾರಿ ಪ್ರಾಣಿಗಳ ವೈಜ್ಞಾನಿಕ ಸಮೀಕ್ಷೆ ನಡೆಸಲಾಗುವುದು. ಕೊನೆಯ ಮೂರು ದಿನ ಮೊಲ, ಜಿಂಕೆ ಮುಂತಾದ ಸಸ್ಯಹಾರಿ ಪ್ರಾಣಿಗಳ ಸಂಖ್ಯಾ ಬಾಹುಳ್ಯ ಸಮೀಕ್ಷೆ ನಡೆಸಲಾಗುವುದು ಎಂದರು.
180 ಸ್ವಯಂ ಸೇವಕರು: ಈ ಗಣತಿ ಕಾರ್ಯಕ್ಕೆ 180 ಸ್ವಯಂ ಸೇವಕರನ್ನು ನೇಮಿಸಲಾಗುವುದು. ಆದರೆ, ಅವರು ಇಚ್ಛೆಪಟ್ಟ ಅಭಯಾರಣ್ಯಕ್ಕೆ ಹೋಗುವಂತ್ತಿಲ್ಲ. ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು, ಚೀಟಿ ಎತ್ತುವ ಮೂಲಕ ಬೇರೆ ಬೇರೆ ಹುಲಿ ಮೀಸಲು ಪ್ರದೇಶಗಳಿಗೆ ಸ್ವಯಂ ಸೇವಕರನ್ನು ನೇಮಿಸಲಿದ್ದಾರೆ. ಸ್ವಯಂ ಸೇವಕರಿಗೆ ಛಾಯಾಚಿತ್ರ ತೆಗೆಯುವುದು ಮತ್ತು ಧೂಮಪಾನ ಕಡ್ಡಾಯವಾಗಿ ನಿಷೇಧಿಸಲಾಗುವುದು ಎಂದ ಅವರು, ಇದು, ಮೋಜಿಗಾಗಿ ನಡೆಯುವ ಗಣತಿಯಲ್ಲ, ಸೂಕ್ಷ್ಮವಾಗಿ ನಡೆಯುವ ಕೆಲಸ ಇದಾಗಿದೆ ಎಂದು ಹೇಳಿದರು.
36 ಬೀಟ್‌ಗಳು: ಭದ್ರಾ ಅಭಯಾರಣ್ಯದಲ್ಲಿ ಒಟ್ಟು 36 ಬೀಟ್‌ಗಳಿದ್ದು, ಒಂದೊಂದು ಬೀಟ್‌ನಲ್ಲಿ ತಲಾ ಎರಡು ಟ್ರಾನ್‌ಸೆಕ್ಟ್‌ಗಳಿರುತ್ತವೆ.
ಒಂದು ತಂಡದಲ್ಲಿ ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿ, ಓರ್ವರು ಅಥವಾ ಅದಕ್ಕಿಂತ ಹೆಚ್ಚು ಸ್ವಯಂ ಸೇವಕರು ಇರುತ್ತಾರೆ ಎಂದು ತಿಳಿಸಿದರು.
ಬಫೋರ್ ಜೋನ್: ಇಡೀ ಭದ್ರಾ ಅಭಯಾರಣ್ಯ ಹುಲಿಯ ಕೋರ್ ಪ್ರದೇಶವಾಗಿದ್ದು, ಇದರ ವ್ಯಾಪ್ತಿಯೊಳಗೆ ಹಳ್ಳಿಗಳು ಇವೆ. ಈ ಭಾಗದಲ್ಲಿ ಹುಲಿ ಮತ್ತು ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಸಂಚರಿಸುತ್ತವೆ.
ಹಳ್ಳಿಗರ ಭಯವನ್ನು ಹೋಗಲಾಡಿಸಲು ಈ ಅರಣ್ಯ ವ್ಯಾಪ್ತಿಯ ಸುಮಾರು 10 ಕಿ.ಮೀ.ವರೆಗಿನ ಪ್ರದೇಶವನ್ನು ಬಫೋರ್ ಜೋನ್‌ವೆಂದು ಘೋಷಿಸುವಂತೆ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಈವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದರು.
ಈ ಪ್ರದೇಶದಲ್ಲಿ ಹೊಸದಾಗಿ ರೆಸಾರ್ಟ್‌ಗಳನ್ನು ನಿರ್ಮಿಸುವಂತ್ತಿಲ್ಲ, ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳುವಂತ್ತಿಲ್ಲ ಮತ್ತು ಕಿರು ಜಲ ವಿದ್ಯುತ್ ಯೋಜನೆ ನಿರ್ಮಾಣ ಮಾಡುವಂತ್ತಿಲ್ಲ ಎಂದು ಹೇಳಿದರು.
ಚಿಕ್ಕಮಗಳೂರಿನಿಂದ ಕೆಮ್ಮಣ್ಣಗುಂಡಿಗೆ ಹೋಗುವ ರಸ್ತೆಯನ್ನು ಅಗಲೀಕರಣ ಮಾಡುವ ಸಂಬಂಧ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.