ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದ ಆಶಯ
ಚಿಕ್ಕಮಗಳೂರು: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣದ ಆಶಯವಾಗಿದ್ದು, ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ ಹೇಳಿದ್ದಾರೆ.
ಬೈಪಾಸ್ ರಸ್ತೆ ಕಲ್ಯಾಣನಗರದ ಯುರೇಕಾ ಕ್ಯಾಂಪಸ್ನಲ್ಲಿ ಇತ್ತೀಚೆಗೆ ಯುರೇಕಾ ಅಕಾಡೆಮಿ ಆಯೋಜಿಸಿದ್ದ ಮಕ್ಕಳ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬೊಬ್ಬರಲ್ಲಿ ಒಂದೊಂದು ಪ್ರತಿಭೆ, ಕಲೆ, ಕೌಶಲ್ಯ, ನೈಪುಣ್ಯತೆ ಇರುತ್ತದೆ. ಪ್ರತಿ ಮಕ್ಕಳೂ ಪ್ರತಿಭಾಶಾಲಿಗಳೇ. ನೃತ್ಯ, ಹಾಡು, ಓಟ, ಆಟ, ಓದು.. ಹೀಗೆ ಹಲವು ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆ ಹೊರಹೊಮ್ಮಲು ಇಂತಹ ಸಂಸ್ಥೆಗಳು ಉತ್ತಮ ಅವಕಾಶ ಕಲ್ಪಿಸಿಕೊಡುತ್ತಿದೆ. ಮಕ್ಕಳ ಮುದ್ದುಮಾತು, ಹಾವಭಾವ, ಕುಣಿತ ಎಲ್ಲವೂ ಚೆನ್ನ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಟ್ನಳ್ಳಿ ಮಹೇಶ್ ಮಾತನಾಡಿ, ಮಕ್ಕಳು ದೇವರಿಗೆ ಸಮಾನ. ದೈವ ಸಾಮ್ರಾಜ್ಯದ ಸುಂದರ ಪುಷ್ಪ ಮಕ್ಕಳು. ಅವರಲ್ಲಿ ಹಣದ ವ್ಯಾಮೋಹಕ್ಕಿಂತ ಗುಣವಂತಿಕೆ, ನೀತಿವಂತಿಕೆ ಬೆಳೆಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯಾಗಿಸಬೇಕೆಂದು ಹೇಳಿದರು.