'ಸಾಂಸ್ಕೃತಿಕ ಶ್ರೀಮಂತಿಕೆ ಉಳಿಸಲು ಮುಂದಾಗಿ'
ಚಿಕ್ಕಮಗಳೂರು:ಅವನತಿ ಅಂಚಿನಲ್ಲಿರುವ ಕನ್ನಡ ಭಾಷೆ ಉಳಿಸಿಕೊಳ್ಳುವ ಮೂಲಕ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಲು ಕನ್ನಡಿಗರು ಮುಂದಾಗಬೇಕು ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಬೋಳರಾಮೇಶ್ವರ ಯುವಕ ಸಂಘ ನಗರದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ರಾಷ್ಟ್ರದ ಅಥವಾ ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ ಇರುವುದು ಅಲ್ಲಿನ ಭಾಷೆಯಲ್ಲಿ. ಅದು ಉಳಿಯಬೇಕಾದರೆ ಅಲ್ಲಿನ ಭಾಷೆ ಉಳಿಯಬೇಕು ಎಂದ ಅವರು, ಇದನ್ನು ಕನ್ನಡಿಗರು ಅರ್ಥಮಾಡಿಕೊಂಡು ತಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು.
ಅಭಿಮಾನ ಅಗತ್ಯ: ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಕನ್ನಡ ಭಾಷೆ ಕನ್ನಡಿಗರಿಗೆ ಹೆತ್ತ ತಾಯಿ ಇದ್ದಂತೆ. ಈ ಬಗ್ಗೆ ಕನ್ನಡಿಗರು ಹೆಮ್ಮೆ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಜಯ ಕರ್ನಾಟಕ ಅಧ್ಯಕ್ಷ ಕೆ.ಆರ್. ಅನಿಲ್ಕುಮಾರ್ ಮಾತನಾಡಿದರು. ಬೋಳರಾಮೇಶ್ವರ ಯುವಕ ಸಂಘದ ಅಧ್ಯಕ್ಷ ಸಿ.ಆರ್. ಬಾಲರಾಜ್ ಗೌಡ ಮಾತನಾಡಿದರು.ನಗರಸಭಾ ಸದಸ್ಯ ಭುಂಗರಾಜ್ ಅರಸ್, ದೇವರಾಜ್ ಶೆಟ್ಟಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಧುಕುಮಾರ್ ಅರಸ್, ಎ.ಎಸ್.ಎಸ್. ಆರಾಧ್ಯ ಉಪಸ್ಥಿತರಿದ್ದರು.