ಅನುಕಂಪದ ಬದಲು ಅವಕಾಶ ನೀಡಿ
ಕ.ಪ್ರ. ವಾರ್ತೆ, ಕೊಪ್ಪ, ಡಿ.3
ಅಂಗವಿಕಲರಿಗೆ ಅನುಕಂಪ ತೋರುವ ಬದಲು ಅವರ ಏಳಿಗೆಗಾಗಿ ವಿವಿಧ ಅವಕಾಶಗಳನ್ನು ನೀಡಿ ಅವರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಅಗತ್ಯವಿದೆ ಎಂದು ತಾಪಂ ಉಪಾಧ್ಯಕ್ಷ ಪೂರ್ಣಚಂದ್ರ ತಿಳಿಸಿದರು.
ಮಂಗಳವಾರ ಪುರಭವನದಲ್ಲಿ ಶಿಶುಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ವಿಕಲಚೇತನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಂಗವೈಕಲ್ಯ ಶಾಪವಲ್ಲ, ವೈಕಲ್ಯತೆ ಹೊಂದಿರುವ ಪ್ರತಿಯೊಬ್ಬರೂ ವಿಶಿಷ್ಟ ಪ್ರತಿಭೆ ಹೊಂದಿರುತ್ತಾರೆ ಎಂದರು.
ಸೂಕ್ತ ವೇದಿಕೆ: ಅಂತಹವರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡಬೇಕಾದ ಜವಾಬ್ದಾರಿಯನ್ನು ನಾವು ಮಾಡಬೇಕಾಗಿದೆ. ಅವರುಗಳು ಸ್ವವಲಂಬನೆಯ ಜೀವನವನ್ನು ಕಟ್ಟಿಕೊಳ್ಳಲು ಸಹಕಾರ ನೀಡುವ ಉದ್ದೇಶದಿಂದ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಅದರಂತೆ ಕಳೆದ 3 ವರ್ಷದಿಂದ ತಾಪಂ ಸದಸ್ಯರಿಗೆ ನೀಡುವ ಅನುದಾನದ ಶೇ.3 ಹಣವನ್ನು ವಿಕಲ ಚೇತನರ ಅಭಿವೃದ್ಧಗೆ ನೀಡಲಾಗುತ್ತಿದೆ ಎಂದರು.
ತಹಸೀಲ್ದಾರ್ ಶ್ರೀಧರ್ ಮೂರ್ತಿ ಎಸ್. ಪಂಡಿತ್ ಮಾತನಾಡಿ, ವಿಶ್ವಚೇತನರ ಸಾಧನೆ ಗುರುತಿಸಿ ಸನ್ಮಾನ ಮಾಡುವ ಮೂಲಕ ಅವರನ್ನು ಬೆನ್ನುತಟ್ಟಿ ಅವರ ಸಾಧನೆಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಸಮಾರಂಭದಲ್ಲಿ ವಿಕಲಚೇತನರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದಂೆ ಎಂದರು.
ವಿಕಲಚೇತನರಿಗೆ ವಿವಿಧ ಆಟೋಟ ಹಾಗೂ ಸಂಸ್ಕೃತಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಜಿಪಂ ಸದಸ್ಯೆ ಅನ್ನಪೂರ್ಣ ಚನ್ನಕೇಶವ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ಪದ್ಮವತಿ ರಮೇಶ್ ವಹಿಸಿದ್ದರು. ತಾಪಂ ಸದಸ್ಯ ಬಿ.ಆರ್. ನಾರಯಾಣ್, ಪ್ರೇಮಾ ದಾಮೋದರ್, ಪಪಂ ಸದಸ್ಯೆ ವಾಣಿ ಸತೀಶ್, ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಪ್ರಕಾಶ್, ಕಾರ್ಯನಿರ್ವಣಾಧಿಕಾರಿ ತಿಪ್ಪೇಶ್, ಶಿಶುಕಲ್ಯಾಣಾಧಿಕಾರಿ ಮೋಹಿನಿ ಇದ್ದರು.