ಆಸ್ತಿ ಹಸ್ತಾಂತರಿಸಲು ಪುರಸಭೆ ಸದಸ್ಯರ ಒತ್ತಾಯ
ತರೀಕೆರೆ: ಪಟ್ಟಣದಲ್ಲಿರುವ ಪುರಸಭೆ ಆಸ್ತಿಯನ್ನು ರೋಟರಿ ಸಂಸ್ಥೆಯವರಿಂದ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಪುರಸಭೆ ಸದಸ್ಯರು ಒತ್ತಾಯಿಸಿದ್ದಾರೆ.
ರೋಟರಿ ಸಂಸ್ಥೆಯವರು ಒಂದಲ್ಲಾ ಒಂದು ಸಾರ್ವಜನಿಕ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯ, ಆದರೆ ಸಾರ್ವಜನಿಕ ಸೇವೆ ಮತ್ತು ಶಿಕ್ಷಣ ಸಂಸ್ಥೆಯ ನೆಪದಲ್ಲಿ ಪುರಸಭೆ ಸ್ವತ್ತನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನ ಖಂಡನೀಯ, ಸುಮಾರು 50 ಸಾವಿರ ಜನರಿಗೆ ನೀರು ಸರಬರಾಜು ಮಾಡುವ ಪುರಸಭೆ ಪ್ರದೇಶಕ್ಕೆ ಹೊಂದಿಕೊಂಡಿರುವ ಪುರಸಭೆ ಜಾಗದಲ್ಲಿ ರೋಟರಿ ಸಂಸ್ಥೆಯ ಕಾರ್ಯ ಚಟುವಟಿಕೆ ಸುಮಾರು 40 ವರ್ಷಗಳಿಂದ ಇಲ್ಲಿಯವರೆಗೂ ನಡೆದಿದೆ.
ಈಗ ರೋಟರಿ ಸಂಸ್ಥೆಯವರು ಘನ ನ್ಯಾಯಾಲಯದ ಆದೇಶದಂತೆ ಸ್ವಯಂ ಪ್ರೇರಣೆಯಿಂದ ರೋಟರಿ ಸಂಸ್ಥೆ ನಡೆಸುತ್ತಿರುವ ಜಾಗವನ್ನು ಪುರಸಭೆಗೆ ವಹಿಸಬೇಕು. ರೋಟರಿ ಸಂಸ್ಥೆ ಶಿಸ್ತಿಗೆ ಹೆಸರಾಗಿರುವಂತದ್ದು, ಆ ಕಾರಣಕ್ಕೆ ಪುರಸಭೆಯೊಂದಿಗೆ ಸಂಘರ್ಷಕ್ಕೆ ಇಳಿಯದೆ ಪ್ರೀತಿಯಿಂದ ಪುರಸಭೆ ಆಸ್ತಿಯನ್ನು ಪುರಸಭೆಗೆ ಹಸ್ತಾಂತರ ಮಾಡಬೇಕು ಎಂದು ಸದಸ್ಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪುರಸಭೆ ಜಾಗವನ್ನು ಪುರಸಭೆಗೆ ನೀಡಲು ಎಲ್ಲಾ ಪುರಸಭಾ ಸದಸ್ಯರು ಸಾರ್ವಜನಿಕರ ಪರವಾಗಿ ರೋಟರಿ ಸಂಸ್ಥೆಯವರಿಗೆ ಮನವಿ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.