ಪರಿಸರ ಸ್ವಚ್ಛತೆಯಿಂದ ಆರೋಗ್ಯ ವೃದ್ಧಿ
ಬಾಳೆಹೊನ್ನೂರು: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣವನ್ನು ಇತ್ತೀಚೆಗೆ ಶ್ರಮದಾನದ ಮೂಲಕ ಸ್ವಚ್ಛತೆಗೊಳಿಸಲಾಯಿತು.
ರೋಟರಿ ಅಧ್ಯಕ್ಷ ಎಚ್.ಎಂ. ಇಬ್ರಾಹಿಂ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಸೇವಾ ಯೋಜನೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಸೇವಾ ಮನೋಭಾವ ಬೆಳೆಯುತ್ತದೆ ಎಂದು ತಿಳಿಸಿದರು. ಸ್ಥಳೀಯ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಹಾಗೂ ಎಸ್ಜೆಆರ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಎಸ್ಜೆಆರ್ ಕಾಲೇಜಿನ ಉಪನ್ಯಾಸಕ ಜಾನ್ ವಿಲ್ಸನ್, ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಸಂತ್, ಇ.ಎಲ್. ಪ್ರಶಾಂತ್, ರೋಟರಿ ಕಾರ್ಯದರ್ಶಿ ಕೆ.ಎಚ್. ನಾಗೇಶ್, ದಂತ ವೈದ್ಯ ಡಾ. ಪ್ರೇಮ್ಕುಮಾರ್ ಉಪಸ್ಥಿತರಿದ್ದರು.
--
12ರಂದು ಪ್ರತಿಭಾ ಕಾರಂಜಿ
ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ತಿಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಕರ್ತಿಕೆರೆ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಶೈಕ್ಷಣಿಕ ಹಬ್ಬ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಡಿ.12 ರಂದು ಬೆಳಿಗ್ಗೆ 8.30ಕ್ಕೆ ಕರ್ತಿಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.