ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಛತೆ
ಕ.ಪ್ರ. ವಾರ್ತೆ, ಕಡೂರು, ಡಿ.4
ತಾಲೂಕಿನ ಬಾಸೂರು ಗ್ರಾಮದ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೂಲ ಸವಲತ್ತುಗಳಿಲ್ಲದೆ ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಛ ಮಾಡಿಸುವ ಕೃತ್ಯ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ಬಾಸೂರು ಗ್ರಾಮಸ್ಥರು ಸಿಎಂ ಮೇಲಧಿಕಾರಿಗಳು ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಬಾಸೂರು ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಅವ್ಯವಸ್ಥೆಯ ಆಗರವಾಗಿದೆ. ವಿದ್ಯಾರ್ಥಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿರುವ ಬಗ್ಗೆ ಕಡೂರು ಕಾಂಗ್ರೆಸ್ ಪಕ್ಷ ಮಾಧ್ಯಮ ಸಮಿತಿ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಗ್ರಾಮದ ಮುಖಂಡ ಬಿ.ಜಿ. ಸೋಮಶೇಖರ್, ಭೂ ಶಕ್ತಿ ವೇದಿಕೆ ಜಿಲ್ಲಾ ಸಂಯೋಜಕ ಟಿ.ಎಸ್.ಚಂದ್ರಪ್ಪ, ಅಶೋಕ್ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ಸೊಳ್ಳೆಕಾಟ: 5 ರಿಂದ 10ನೇ ತರಗತಿವರೆಗೆ 55 ವಿದ್ಯಾರ್ಥಿಗಳು ವಾಸ ಮಾಡುತ್ತಿರುವ ಈ ಹಾಸ್ಟೆಲ್ನಲ್ಲಿ ಕಿಟಕಿಗಳು ಇಲ್ಲ, ಫ್ಯಾನುಗಳು ಮೊದಲೇ ಇಲ್ಲ. ಸಂಜೆಯಾಯಿತೆಂದರೆ ಸೊಳ್ಳೆ ಕಾಟದಲ್ಲೇ ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾದ ಸ್ಥಿತಿ ಇದೆ. ಸುಣ್ಣಬಣ್ಣ ಕಾಣದೆ ಬಹಳ ವರ್ಷಗಳೇ ಕಂಡಿದೆ ಎಂದು ಪ್ರತಿಭಟನಕಾರರು ದೂರಿದರು.
ಚಂದ್ರಮೌಳಿ ಸೇರಿದಂತೆ ಮುಖಂಡರು ಆರೋಪಿಸುವಂತೆ, ಈ ಹಾಸ್ಟೆಲ್ ಆರಂಭವಾದ ಮೇಲೆ ಸುಣ್ಣ ಬಣ್ಣ ಕಾಣದೆ ಸುಮಾರು 15 ವರ್ಷವಾಗಿದ್ದು, ಕಿಟಕಿಗಳು ಮುರಿದಿದ್ದರೂ ಕೂಡ ದುರಸ್ತಿ ಪಡಿಸಿಲ್ಲ. ಮಕ್ಕಳಿಗೆ ಊಟ ಕೊಟ್ಟರೆ ಸಾಕೇ ಮೂಲ ಸವಲತ್ತು ಒದಗಿಸುವುದು ಬೇಡವೇ ಎನ್ನುತ್ತಾರೆ.
ತೊಂದರೆ ಕೇಳೋರಿಲ್ಲ; ಹಾಸ್ಟೆಲ್ ಮೇಲ್ವಿಚಾರಕರು ಬೆಳಗ್ಗೆ ಬಂದು ಹೋದರೆ ಮತ್ತೆ ಬರುವುದು ಮಾರನೇ ದಿನ. ಅಡುಗೆ ಸಹಾಯಕರೊಬ್ಬರು ಮಾತ್ರ ಇಲ್ಲಿದ್ದು ಹಾಸ್ಟೆಲ್ನ ಅಡುಗೆ ತಯಾರಕ ಹಾಸ್ಟೆಲ್ಗೆ ಬರುವುದಿಲ್ಲ. ವಿದ್ಯಾರ್ಥಿಗಳಿಗೆ ರಾತ್ರಿ ವೇಳೆ ತೊಂದರೆಯಾದರೂ ಕೇಳುವವರಿಲ್ಲ ಎಂದು ದೂರಿದರು.
ಹಾಸ್ಟೆಲ್ನ ಕಿಟಕಿ ಬಾಗಿಲುಗಳು ಮುರಿದು ಮೂಲೆಗೆ ಹಾಕಿದ್ದರೂ, ರಿಪೇರಿ ಮಾಡಿಸಿಲ್ಲ. ಅಧಿಕಾರಿಗಳು ಈ ಹಾಸ್ಟೆಲ್ಗೆ ಭೇಟಿಯನ್ನೂ ನೀಡದೆ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಬಿ.ಸಿ. ರವಿಶಂಕರ್, ದಯಾನಂದ್, ಪ್ರವೀಣ್ ಗ್ರಾಮಸ್ಥರು ಭಾಗವಹಿಸಿದ್ದರು.