ಅಂಗವಿಕಲತೆ ಶಾಪವಲ್ಲ: ಡಾ. ಅನಿತ್
ಶೃಂಗೇರಿ: ವಿಕಲಚೇತನರು ಶಾಪಗ್ರಸ್ತರಲ್ಲ, ಅಂಗವಿಕಲತೆ ಶಾಪವಲ್ಲ ಎಂದು ಡಾ. ಅನಿತ್ ಕುಮಾರ್ ತಿಳಿಸಿದರು.ಅವರು ಪಪಂ ಬಳಿ ಮಾನವ ಹಕ್ಕು ತಾಲೂಕು ಘಟಕ ಆಯೋಜಿದ್ದ ವಿಶ್ವ ವಿಕಲಚೇತನರ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 18,364 ವಿಕಲಚೇತನರು ಇದ್ದರೆ ತಾಲೂಕಿನಲ್ಲಿ 604 ಮಂದಿ ವಿಕಲ ಚೇತನರಿದ್ದಾರೆ. ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸವಲತ್ತು ಇವರಿಗೆ ಸಿಗುವಂತೆ ಮಾಡುವುದು ನಮ್ಮ ಕರ್ತವ್ಯ. ವಿಕಲಚೇತನರನ್ನು ಪ್ರೀತಿಯಿಂದ ಗೌರವದಿಂದ ಕಾಣಬೇಕು. ವಿಕಲಚೇತನರ ಬಗ್ಗೆ ತಾತ್ಸರ ಬೇಡ. ಅಂಗವಿಕಲತೆಯನ್ನು ಒಪ್ಪಿಕೊಳ್ಳದೇ ಸಾಧನೆ ಮಾಡಿದ ಅನೇಕ ವ್ಯಕ್ತಿಗಳು ವಿವಿಧ ಕ್ಷೇತ್ರಗಳಲ್ಲಿ ಇದ್ದಾರೆ. ಕ್ರೀಡಾ ಕ್ಷೇತ್ರಗಳಲ್ಲಿಯೂ ಸಾಧನೆಗೈದವರು ಇದ್ದಾರೆ ಎಂದರು.
ಮಾನವ ಹಕ್ಕು ಆಯೋಗದ ತಾಲೂಕು ಘಟಕದ ಅಧ್ಯಕ್ಷೆ ಶೋಭಾ ಅನಂತಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರತಿನಿಧಿ ಶೃಂಗೇರಿ ಸುಬ್ಬಣ್ಣ, ತಾಲೂಕು ಕಾರ್ಯದರ್ಶಿ ಜೆ. ಗಿರಿಧರ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಾಬಲೇಶ್ವರ ಅವರನ್ನು ಸನ್ಮಾನಿಸಲಾಯಿತು.