ಕುಸಿಯುವ ಭೀತಿಯಲ್ಲಿ ಕಿರ್ಕೋಡು ಶಾಲೆ
ಕ.ಪ್ರ.ವಾರ್ತೆ, ಶೃಂಗೇರಿ, ಡಿ.5
ಇಲ್ಲಿನ ಶಾಲೆಯೊಂದರ ಕೊಠಡಿಯೊಳಗೆ ಗೆದ್ದಲು ರಾಶಿರಾಶಿಯಗಿ ಕೆಳಬೀಳುತ್ತಿವೆ. ಚಾವಣಿ ಶಿಥಿಲಗೊಂಡು ಹೆಂಚುಗಳು ಒಂದಕ್ಕೊಂದು ಕೂಡಿಕೊಂಡು ಸ್ವಂತ ಬಲದ ಮೇಲೆ ಚಾವಣಿಗೆ ಆಶ್ರಯವಾಗಿ ಇವೆ. ಇತರ ಮರದ ರೀಪುಗಳು ಗೆದ್ದಲು ಹಿಡಿದಿದ್ದು, ಇಂದೋ ನಾಳೆಯೋ ಕುಸಿಯುವ ಹಂತದಲ್ಲಿದೆ.
ಇದು ತಾಲೂಕಿನ ಮೆಣಸೆ ಪಂಚಾಯಿತಿ ಕಿರ್ಕೋಡು ಸ.ಕಿ.ಪ್ರಾ. ಶಾಲೆಯ ವ್ಯಥೆ. ದೇಶಕ್ಕೆ ಸ್ವಾಂತಂತ್ರ್ಯ ಬಂದ ಆರಂಭದಲ್ಲಿ ಸ್ಥಾಪನೆಗೊಂಡ ಈ ಶಾಲೆಗೆ ಸುಮಾರು 65 ವರ್ಷ ಸುದೀರ್ಘ ಇತಿಹಾಸವಿದೆ. ಆದರೆ ಕಡ್ಡಾಯ ಶಿಕ್ಷಣ, ಶೈಕ್ಷಣಿಕ ಕ್ರಾಂತಿಯನ್ನೇ ಮಾಡುತ್ತಿರುವ ಸರ್ಕಾರಗಳು ಕನಿಷ್ಠ ಇಂತಹ ಶಾಲೆಯ ದುಸ್ಥಿತಿಗೆ ಸ್ಪಂದಿಸದಿರುವುದು ಆಶ್ಚರ್ಯವೇ ಸರಿ.
ಇಲ್ಲಿನ ಕೊಠಡಿಗಳು ಉಪಯೋಗಕ್ಕೆ ಬಾರದೇ ಹಾಳು ಬಿದ್ದಂತಿವೆ. ಶಾಲೆಯ ಪಕ್ಕದ ರಂಗಮಂದಿರದಲ್ಲಿ ಮಕ್ಕಳು ಪಾಠಪ್ರವಚನ ಕೇಳುವ ಪರಿಸ್ಥಿತಿ ಉಂಟಾಗಿದೆ. ಬಿಸಿಲಿಗೆ ಟಾರ್ಪಲ್ ಎಳೆದು ಅದರೊಳಗೆ ಪಾಠ ಕೇಳುವ ಪರಿಸ್ಥಿತಿ ವಿದ್ಯಾರ್ಥಿಗಳದ್ದು.
ಸರ್ಕಾರದ ನಿರ್ಲಕ್ಷ್ಯ: ಕಳೆದ ಒಂದು ವರ್ಷದಿಂದ ಶಿಥಿಲಾವಸ್ಥೆಯಲ್ಲಿದ್ದರೂ, ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಈ ವರ್ಷದ ಮಳೆಗಾಲವೆಲ್ಲ ಬೇರೆ ದಾರಿಯಿಲ್ಲದೇ ಶಿಕ್ಷಕರು, ವಿದ್ಯಾರ್ಥಿಗಳು ಶಾಲೆಯ ಕೊಠಡಿಯೊಳಗೆ ಕಲೆದಿದ್ದಾರೆ.
ಈ ಬಗ್ಗೆ ಸ್ಥಳೀಯರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಸಂಬಂಧಿಸಿದ ಇಲಾಖೆಗೆ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಕಳೆದೆರೆಡು ದಿನದ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಬೇರೆ ಶಾಲೆಯ ಎಸ್ಡಿಎಂಸಿಯಿಂದ ರು. 60,000 ನೀಡಿದ್ದಾರೆ. ಆದರೆ ಇದು ಯಾವುದೇ ಪ್ರಯೋಜನಕ್ಕೂ ಸಾಲದು ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು.
ಮಳೆ ನೀರು...!: ಅಲ್ಲದೇ ಇಲ್ಲಿ ಸಮಪರ್ಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ವಿದ್ಯಾರ್ಥಿಗಳು ಮನೆಯಿಂದಲೇ ಕುಡಿವ ನೀರು ತರಬೇಕು. ಬಿಸಿಯೂಟದ ಅಡುಗೆಗೆ ದೂರದ ಮನೆಯೊಂದರಿಂದ ನೀರು ತರಬೇಕು. ಮಳೆಗಾಲದಲ್ಲಿ ಮಳೆ ನೀರನ್ನೇ ಅವಲಂಬಿಸಬೇಕು.
ಶೌಚಾಲಯವಿದ್ದರೂ, ಅದಕ್ಕೂ ನೀರಿನ ವ್ಯವಸ್ಥೆಯೇ ಇಲ್ಲ. ಮಳೆಗಾಲದಲ್ಲಿ ತೊಂದರೆಯಾಗುತ್ತದೆ. ಚಿಕ್ಕಮಕ್ಕಳಾಗಿದ್ದರಿಂದ ನೀರು ತರಲು ಕಳುಹಿಸಲು ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೆ. ಕಾರಣ ನೀರು ತರುವ ಸ್ಥಳವೂ ಅಪಾಯಕಾರಿಯಾಗಿದೆ. ಈ ಬಗ್ಗೆ ವಾರ್ಡ್ ಸಭೆ, ಗ್ರಾಮಸಭೆ, ಜನಸ್ಪಂದನ ಸಭೆಗಳಲ್ಲಿ ಸಂಬಂಧಪಟ್ಟ ಅಧಿಕಾರಿ, ಇಲಾಖೆ, ಜನಪ್ರತಿನಿಧಿಗಳ ಗಮವನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಸದಸ್ಯ ಎಸ್.ಎಮ್. ರಮೇಶ್, ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್.
ಸೌಕರ್ಯ ವಂಚಿತ: ಸರ್ಕಾರಗಳು ಶಿಕ್ಷಣಕ್ಕೆ ಉತ್ತೇಜನ ನೀಡುತ್ತಾ ವಿವಿಧ ಯೋಜನೆ ಜಾರಿಗೊಳಿಸಿ ಸೌಕರ್ಯಗಳನ್ನು ನೀಡುತ್ತಿದೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳು ಮೂಲ ಸೌಕರ್ಯದಿಂದಲೇ ವಂಚಿತವಾಗಿ ಕುಸಿಯುವ ಹಂತದಲ್ಲಿದೆ.
ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಸರ್ಕಾರ ಕೂಡಲೇ ಇತ್ತ ಗಮನಹರಿಸಿ ದುರಸ್ತಿಗೆ ಮುಂದಾಗದಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಶಾಲೆಯ ಚಾವಣಿ ಕುಸಿಯುವುದರಲ್ಲಿ ಸಂಶಯವಿಲ್ಲ. ಕೂಡಲೇ ಗಮನ ಹರಿಸಬೇಕು. ಶಾಲೆ ಕಟ್ಟಡ ದುರಸ್ತಿಪಸಬೇಕು. ಸರ್ಕಾರ ಇನ್ನಾದರೂ ಇತ್ತ ಗಮನಹರಿಸಿ ಶಾಲೆಗೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಿ ಶಾಲೆಯ ಮೇಲ್ಚಾವಣಿ ದುರಸ್ತಿ, ಕುಡಿಯುವ ನೀರು ಸೇರಿದಂತೆ ಇಲ್ಲಿಗೆ ಅಗತ್ಯ ಮೂಲ ಸೌಕರ್ಯಗಳನ್ನು ದೊರಕಿಸಿಕೊಡಬೇಕಿದೆ. ದೊರಕಿಸಿಕೊಡಬೇಕು.
-ನೆಮ್ಮಾರ್ ಅಬೂಬಕರ್