ಬತ್ತ ಖರೀದಿಗೆ ತಾಪಂ ಅಧ್ಯಕ್ಷರ ಸೂಚನೆ
ನರಸಿಂಹರಾಜಪುರ: ಬತ್ತ ಖರೀದಿ ಕೇಂದ್ರದ ಹೌಸಿಂಗ್ ಬೋರ್ಡಿನ ಸಮುದಾಯ ಭವನ ತುಂಬಿದರೂ ಬೇರೆ ಗೋದಾಮು ವ್ಯವಸ್ಥೆ ಮಾಡಿ ರೈತರಿಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕು ಎಂದು ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್ ಸೂಚಿಸಿದರು.
ಶನಿವಾರ ಹೌಸಿಂಗ್ ಬೋರ್ಡ್ ಕಾಲೋನಿಯ ಪಪಂ ಸಮುದಾಯ ಭವನದಲ್ಲಿ ಬತ್ತ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ರೈತರು ಬತ್ತ ಬೆಳೆದರೆ ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತದೆ. ಗದ್ದೆ ಕೊಯ್ಲು ಮಾಡಿ ಮಾರುಕಟ್ಟೆಗೆ ಬತ್ತ ತರುವಾಗ ಬತ್ತದ ಬೆಲೆ ಕುಸಿದಿರುತ್ತದೆ. ಆದ್ದರಿಂದ ಸರ್ಕಾರವು ಬೆಂಬಲ ಬೆಲೆ ನೀಡಿ ಬತ್ತ ಖರೀದಿಸುತ್ತಿದೆ. ಒಂದು ತಿಂಗಳು ಮುಂಚಿತವಾಗೇ ಬತ್ತ ಖರೀದಿ ಕೇಂದ್ರ ಪ್ರಾರಂಭವಾಗಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
ಕೊಪ್ಪ ಎಪಿಎಂಸಿ ಕಾರ್ಯದರ್ಶಿ ಚಿಕ್ಕಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾನ್ಯ ಬತ್ತಕ್ಕೆ 1310 ಬೆಂಬಲ ಬೆಲೆ ನಿಗದಿ ಮಾಡಿದ್ದು, ಸರ್ಕಾರವು 290 ಪ್ರೋತ್ಸಾಹಧನ ನೀಡುತ್ತಿರುವುದರಿಂದ ಪ್ರತಿ ಕ್ವಿಂಟಲ್ ಬತ್ತಕ್ಕೆ 1,600 ನೀಡಲಾಗುತ್ತದೆ. ಪ್ರತಿ ರೈತರಿಂದ 25 ಕ್ವಿಂಟಲ್‌ದಿಂದ 100 ಕ್ವಿಂಟಲ್ ಬತ್ತದವರೆಗೆ ಖರೀದಿಸಲಾಗುತ್ತದೆ. ರೈತರು ಬತ್ತ ಮಾರಾಟಕ್ಕೆ ಬರುವ ಮುನ್ನ ಜಮೀನಿನ ಪಹಣಿ, ಭೂ ಹಿಡುವಳಿ ದಾಖಲೆ, ಬೆಳೆ ದೃಢೀಕರಣ, ಭಾವಚಿತ್ರ, ಬತ್ತದ ಸ್ಯಾಂಪಲ್ ತರಬೇಕು. ಬತ್ತವನ್ನು ತರುವ ದಿನಾಂಕ ಮುಂಚಿತವಾಗಿ ತಿಳಿಸಬೇಕು ಎಂದರು.
16 ರಿಂದ ಪ್ರಾರಂಭ: ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, 16 ರಿಂದ ಬತ್ತ ಖರೀದಿಸಲು ಪ್ರಾರಂಭಿಸಲಾಗುವುದು.
ಹೌಸಿಂಗ್ ಬೋರ್ಡ್ ಕಾಲೋನಿಯ ಗೋದಾಮು ಭರ್ತಿಯಾದರೂ ಟಿಎಪಿಸಿಎಂಎಸ್‌ನ ಗೋದಾಮಿನಲ್ಲಿ ಖರೀದಿಸಿದ ಬತ್ತ ಸಂಗ್ರಹಿಸಲಾಗುವುದು ಎಂದು ತಿಳಿಸಿದರು. ಕೃಷಿಕರಾದ ಕೃಷ್ಣಯ್ಯ, ಸೋಮದತ್ತ ಉಪಸ್ಥಿತರಿದ್ದರು.