ಅಂಬೇಡ್ಕರ್ ಚಿಂತನೆ ಪಾಲನೆ ಅವಶ್ಯ
ಕ.ಪ್ರ.ವಾರ್ತೆ ಕಡೂರು ಡಿ. 8
ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಈ ದೇಶದ ಜನರಿಗೆ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಸ್ವತಂತ್ರವಾಗಿ ಬದುಕುವ ರೀತಿಯಲ್ಲಿ ಸಂವಿಧಾನ ರೂಪಿಸಿ ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಹೇಳಿದರು.
ಪಟ್ಟಣದ ಮರವಂಜಿ ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಆಟೋ ನಿಲ್ದಾಣದಲ್ಲಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದಿಂದ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 57ನೇ ಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
ಮಹಾಮಾನವತಾವಾದಿ, ಸಮಾಜ ಸುಧಾರಕ ಅಂಬೇಡ್ಕರ್ ದೇಶದಲ್ಲಿರುವ ಎಲ್ಲರೂ ಒಂದೇ ಎಂಬ ಭಾವನೆಯಿಂದ ಅಸ್ಪ ೃಶ್ಯತೆ ನಿವಾರಣೆಗೆ ಶ್ರಮಿಸಿದರು.ಮೂಢನಂಬಿಕೆ ತೊಡೆದುಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಸ್ವಾಭಿಮಾನದ ಬದುಕು ಕೊಡಿಸಲು ಮುಖ್ಯವಾಗಿ ಎಲ್ಲರಿಗೂ ಕಡ್ಡಾಯವಾಗಿ ವಿದ್ಯಾಭ್ಯಾಸ ನೀಡಬೇಕು ಎಂದು ಸಂದೇಶ ನೀಡಿದವರು. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಇದೇ ಸಂದರ್ಭ ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ಬೆಂಕಿ ಶೇಖರಪ್ಪ ಮಾತನಾಡಿ, ಡಾ ಬಿ.ಆರ್. ಅಂಬೇಡ್ಕರ್ ಅವರು ಈ ದೇಶಕ್ಕೆ ಮಾತ್ರವಲ್ಲ. ಇಡೀ ಪ್ರಪಂಚಕ್ಕೆ ಸಂವಿಧಾನ ರೂಪಿಸಿದ ಮಾದರಿಯ ವ್ಯಕ್ತಿಯಾಗಿದ್ದಾರೆ. ಸಮಾನತೆ ಎಂಬುದಕ್ಕೆ ತನ್ನದೇ ಆದ ಅವರ ಕನಸು ಸಾಕಾರಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.
ಇದೇ ಸಂದರ್ಭ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳಾದ ತಿಮ್ಮಯ್ಯ, ಕೆ.ಎಚ್. ಓಂಕಾರಪ್ಪ, ಮಹೇಶ್, ಶ್ರೀನಿವಾಸ್, ರಂಗನಾಥ್, ರಮೇಶ ಗೌಡ, ಮುತ್ತು, ಗಂಗಾಧರ ಮತ್ತಿತರರು ಭಾಗವಹಿಸಿದ್ದರು.