ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಡಕೆ ಬೆಳೆ ನಿಷೇಧ ವಿರುದ್ಧ ಹೋರಾಟ ಅನಿವಾರ್ಯ

Rashmi Kasaragodu
Updated On : 9 Dec 2013, 10:58 am

ಕ.ಪ್ರ.ವಾರ್ತೆ    ಕಡೂರು    ಡಿ. 8
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಅಡಿಕೆ ಬೆಳೆ ನಿಷೇಧಿಸಲು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸುವ ಮೂಲಕ ಅಡಿಕೆ ಬೆಳೆಗಾರರನ್ನು ಬೀದಿಗೆ ತಳ್ಳುವ ಕ್ರಮಕ್ಕೆ ಮುಂದಾಗಿರುವುದು ಖಂಡನೀಯವಾಗಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ರಾಜ್ಯ ಸೇರಿದಂತೆ ದೇಶಾದ್ಯಂತ ರೈತರು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಅರೇಕಲ್ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಹಿಂದೆಯೂ ಕಾಂಗ್ರೆಸ್ ಸರ್ಕಾರ ಗುಟ್ಕಾ ನಿಷೇಧ ಮಾಡಿ ಅಡಿಕೆ ಬೆಳೆಗಾರರಿಗೆ ಬರೆ ಎಳೆದಿತ್ತು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಗುಟ್ಕಾ ನಿಷೇಧ ಮಾಡಿ ರೈತರನ್ನು ಸಂಕಷ್ಟಕ್ಕೀಡು ಮಾಡಿತ್ತು.  ಇದರಿಂದ ರೈತರು ಬೀದಿಗಿ ಬರುವಂತಾಗಿತ್ತು. ಆದರೆ, ಇದೀಗ ಗುಟ್ಕಾ ಬಳಿಕ ಅಡಕೆಯನ್ನೇ ನಿಷೇಧಿಸಬೇಕು ಎಂದು ಕೇಂದ್ರದ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟಿಗೆ ಅಫೀಲು ಹೋಗಿರುವುದು ಖಂಡನೀಯ. ಇದು ರೈತರನ್ನು ಬೀದಿಪಾಲು ಮಾಡುವ ಕುತಂತ್ರ ಎಂದು ಆರೋಪಿಸಿದರು.
ಸಾವಿರಾರು ವರ್ಷದಿಂದ ಬಳಕೆಯಲ್ಲಿರುವ ಮತ್ತು ಶುಭ ಸಂಕೇತವಾಗಿರುವ ಅಡಿಕೆ, ಎಲೆಯನ್ನು ಸಂಪ್ರದಾಯ ಕಾರ್ಯಕ್ರಮಗಳಲ್ಲಿ ಕೂಡ ಬಳಸಲಾಗುತ್ತದೆ. ಊಟ ಮಾಡಿ ತಾಂಬೂಲ ಜಗಿಯುವುದರಿಂದ ಆಹಾರ ಜೀರ್ಣವಾಗುತ್ತದೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ. ಆದರೂ, ಅಡಕೆ ಬಳಕೆ ಹಾನಿಕರ ಎಂದು ಹೇಳುವುದು ಸರಿಯಲ್ಲ.
ಅಡಿಕೆ ಜೊತೆಗೆ ಹೊಗೆಸೊಪ್ಪು ಹಾಕಿದರೆ ಮಾತ್ರ ಆರೋಗ್ಯಕ್ಕೆ ಹಾನಿಕರ ಎಂಬುದು ವೈಜ್ಞಾನಿಕವಾಗಿ ದೃಢ ಪಟ್ಟಿದೆ. ಕೇಂದ್ರದ ಹೆಚ್ಟುವರಿ ಸಾಲಿಸಿಟರ್ ಜನರಲ್ ಜಸ್ಟೀಸ್ ಜಿ.ಎಸ್. ಸಿಂಘ್ವೀ ಎಂಬವರು ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ. ಪ್ರಪಂಚದಲ್ಲೇ ಭಾರತವು ಅತಿ ಹೆಚ್ಟು ಅಡಕೆ ಬೆಳೆಯುವ ರಾಷ್ಟ್ರವಾಗಿದೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರು ಶೇ.75 ರಷ್ಟು ಅಡಿಕೆ ಬೆಳೆ ಬೆಳೆಯುತ್ತಿದ್ದಾರೆ ಎಂದರು.
ದೇಶದಲ್ಲಿ ಸುಮಾರು 2 ಕೋಟಿ ರೈತರು ಅಡಿಕೆ ಬೆಳೆ ನಂಬಿಯೇ ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ಏಕಾಏಕಿ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಹಾಗೂ ದೇಶದ ರೈತರ ಹಿತ ಕಡೆಗಣಿಸುವ ಮೂಲಕ ಅಡಕೆ ನಿಷೇಧಕ್ಕೆ ಸುಪ್ರೀಕೋರ್ಟಿಗೆ ಮನವಿ ಸಲ್ಲಿಸಿದೆ. ಇದರಿಂದ ದೇಶದ ಎಲ್ಲ ರೈತರೂ ಒಕ್ಕೊರಲಿನಿಂದ ಈ ನಿರ್ಧಾರ ಖಂಡಿಸಿ ಕೇಂದ್ರ ಸರ್ಕಾರವು ಇಂತಹ ದುರುಳ ನಿರ್ಧಾರ ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಬೇಕು ಎಂದು ಅರೇಕಲ್ ಪ್ರಕಾಶ್ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement