ಕಸ್ತೂರಿ ರಂಗನ್ ವರದಿಗೆ ವಿರೋಧ
ಬಾಳೆಹೊನ್ನೂರು: ಮಲೆನಾಡಿನ ರೈತರ ಮೇಲೆ ತೂಗುಗತ್ತಿಯಂತಿರುವ ಡಾ. ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಪಕ್ಷಾತೀತವಾದ ಹೋರಾಟ ಮಾಡಬೇಕಾದ ಅಗತ್ಯತೆ ಇದೆ ಎಂದು ನರಸಿಂಹರಾಜಪುರ ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ವನಿಲ್ಲಾ ಹೇಳಿದ್ದಾರೆ.
ಈ ವರದಿಯನ್ನು ವಿರೋಧಿಸಿ ಜನಪರ ಹೋರಾಟ ರೂಪಿಸಬೇಕಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯು ಯೋಜನೆಯ ಆಳ ಅರಿಯದೆ ಜನಪರ ಕಾಳಜಿ ಇಲ್ಲದೇ ವರ್ತಿಸುತ್ತಿರುವುದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ನರಸಿಂಹರಾಜಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯ್ ಕುಮಾರ್ ಅವರು, 1.60 ಲಕ್ಷ ಚದರ ಕಿಲೋ ಮೀಟರ್ ಎಂದು ವರದಿ ಮಾಡಿದ್ದ ಗಾಡ್ಗೀಲ್ ವರದಿಯನ್ನು ಕಡಿಮೆ ಮಾಡಿ 60 ಸಾವಿರ ಚದರ ಕಿಲೋಮೀಟರ್ಗೆ ತಮ್ಮ ಕಾಂಗ್ರೆಸ್ ಸರ್ಕಾರ ಇಳಿಸಿದೆ ಎಂದು ಹೇಳಿರುವ ಕ್ರಮ ಸುಳ್ಳಾಗಿದೆ. ನ.ರಾ.ಪುರ ತಾಲೂಕಿನಲ್ಲಿ ಬೈರಾಪುರ, ಕುಸುಬೂರು, ಕೋಣಕೆರೆ, ಮಡಬೂರು, ಆರಂಬಳ್ಳಿ, ಮಲ್ಲಂದೂರು, ವಿಠಲ, ಕಡಹಿನಬೈಲು, ಹಂದೂರು, ಬೆಳ್ಳೂರು, ದಂಡುಬಿಟ್ಟಹಾರ, ಕೊನೊಡಿ, ನಂದಿಗಾವೆ, ಗುಬ್ಬಿಗ, ಅರಳಿಕೊಪ್ಪ, ವರ್ಕಾಟೆ, ಸಂಕ್ಸೆ, ಬಾಳೆ, ಸಾಲೂರು, ಹೆಬ್ಬೆ, ಅಳೆಹಳ್ಳೀ, ದಾವಣ, ಸಾರ್ಯ, ಕಾನೂರು, ವಗಡೆ, ಹರಾವರಿ, ಕರ್ಕೇಶ್ವರ, ಹೊಸೂರು, ಮೇಗರಮಕ್ಕಿ, ಮುದುಗುಣಿ, ಹಲಸೂರು ಗ್ರಾಮಗಳು ಕಸ್ತೂರಿ ರಂಗನ್ ವರದಿಯಲ್ಲಿ ಸೇರಿಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷವು ಕ್ಷೇತ್ರದ ಜನರಿಗೆ ತಿಳಿಸಲಿ ಎಂದಿದ್ದಾರೆ.