ಸಮಾಜ ಸೇವೆಗೆ ಸಹಕಾರ ಅಗತ್ಯ
ಕ.ಪ್ರ.ವಾರ್ತೆ, ಬೀರೂರು, ಡಿ.8
ಪಟ್ಟಣದ ಬಳ್ಳಾರಿ ಕ್ಯಾಂಪ್ನಲ್ಲಿ ರಜೆಯೇ ಮುಸ್ತಫಾ ಮುಸ್ಲಿಂ ಯುವಕರ ಸಂಘದ ಪ್ರಾರಂಭೋತ್ಸವ ಸಂದರ್ಭ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಮುಸ್ಲಿಂ ಬಾಂಧವರು ತಮ್ಮಲ್ಲಿನ ಭಾಷಾ ಪ್ರೇಮ ಮೆರೆದಿದೆ.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಮಾತನಾಡಿ, ಪ್ರೀತಿ ಸೌಹಾರ್ದದ ಪ್ರತೀಕ ಎಂಬಂತೆ ಪಟ್ಟಣದ ಅಲ್ಪಸಂಖ್ಯಾತ ಕೋಮಿನ ಜನ ಶಾಂತಿ, ಸಹನೆಯಿಂದ ನಾಗರಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಹಲವಾರು ಕಾರ್ಯಕ್ರಮ ಸಂಘಟಿಸಿ ಸ್ವಯಂ ಪ್ರೇರಣೆಯಿಂದ ಸಮಾಜದ ಮುಖ್ಯ ವಾಹಿನಿಗೆ ಆಗಮಿಸುತ್ತಿರುವುದು ಶ್ಲಾಘನೀಯ. ಯುವಕರ ಸಂಘ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ರೀತಿಯಲ್ಲಿ ಕಾರ್ಯನಿರ್ವಹಿಸಲಿ. ಇದಕ್ಕೆ ಪೂರಕ ಸಹಕಾರ ನೀಡುವ ಭರವಸೆ ನೀಡಿದರು.
ಕನ್ನಡ ಧ್ವಜಾರೋಹಣ ನೆರವೇರಿಸಿದ ವಾರ್ಡ್ ಸದಸ್ಯೆ ವಿಶಾಲ ಜಯರಾಂ ಮಾತನಾಡಿ, ನಾಡು,ನುಡಿ, ಸಂರಕ್ಷಣೆಯಲ್ಲಿ ಸಮಾಜದ ಎಲ್ಲ ವರ್ಗದವರೂ ಪಾಲ್ಗೊಳ್ಳುವ ಅಗತ್ಯವಿದೆ. ಅನ್ಯ ಭಾಷಿಕರಿಂದ ಕನ್ನಡ ಭಾಷೆಯ ಮೇಲಿನ ದೌರ್ಜನ್ಯಗಳಿಗೆ ಸೂಕ್ತ ಉತ್ತರ ನೀಡಲು ನಾವೆಲ್ಲರೂ ಕನ್ನಡಮ್ಮನ ಮಕ್ಕಳಾಗಿ ಕಂಕಣ ತೊಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಶ್ ಒಡೆಯರ್, ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಪಿ.ನಾಗರಾಜ್, ಅಡಿಕೆ ಬೆಳೆಗಾರ ಮಾರ್ಗದ ಮಲ್ಲಿಕಾರ್ಜುನಪ್ಪ, ಪುರಸಭಾ ಸದಸ್ಯರಾದ ಮುಕ್ತಿಯಾರ್, ಜಿಯಾವುಲ್ಲಾ, ವಿಜೇಂದ್ರಬಾಬು ಮಾತನಾಡಿದರು.
ಮುಸ್ಲಿಂ ಯೂತ್ ಕಮಿಟಿ ಗೌರವಾಧ್ಯಕ್ಷ ಮೆಹಮದ್ ರಫಿಕ್ ಹಾಗೂ ವಿವಿಧ ಮಸೀದಿಗಳ ಗೌರವಾಧ್ಯಕ್ಷರು, ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.