'ಕಲಿಕೆ ಪಠ್ಯಕ್ಕೆ ಸೀಮಿತವಾಗದಿರಲಿ'
ನರಸಿಂಹರಾಜಪುರ: ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಂದ ಮಕ್ಕಳ ಪ್ರತಿಭೆ ಅನಾವರಣಗೊಳ್ಳುವುದರ ಜೊತೆಗೆ ಗ್ರಾಮಸ್ಥರಿಗೆ ಹಬ್ಬದ ಅನುಭವ ಮೂಡುತ್ತಿದೆ ಎಂದು ನಾಗರಮಕ್ಕಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಮಿತಿ ಮುಖ್ಯಸ್ಥ ಮೂಡ್ಲಿ ರಾಮಣ್ಣ ತಿಳಿಸಿದರು.
ನಾಗರಮಕ್ಕಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸಂಕದಕುಣಿ ಕ್ಲಸ್ಟರ್ ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಡಿ. ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆ ಶಾಲಾ ಪಠ್ಯಕ್ಕೆ ಸೀಮಿತವಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರವು ಪ್ರತಿಭಾ ಕಾರಂಜಿ ಹಮ್ಮಿಕೊಂಡಿದೆ. ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಸರ್ಕಾರವು ಈ ವರ್ಷ ಕಲಿಕೋತ್ಸವ ಎಂಬ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಾಗಲೇ ಶಾಲಾ ಮಟ್ಟದ ಕಲಿಕೋತ್ಸವ ಮುಕ್ತಾಯಗೊಂಡಿದೆ. ಮುಂದೆ ಕ್ಲಸ್ಟರ್, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಕಲಿಕೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಸೀತೂರು ಗ್ರಾಪಂ ಮಾಜಿ ಅಧ್ಯಕ್ಷ ವೈ.ಎಸ್. ಗಣೇಶ್ ಮಾತನಾಡಿದರು. ತಾಲೂಕು ದೈಹಿಕ ಪರಿವೀಕ್ಷಕ ಕೆ. ಮೌನೇಶ್ವಾರಾಚಾರ್ ಮಾತನಾಡಿ, ಕಳೆದ ವರ್ಷ ಪ್ರಾಥಮಿಕ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 4 ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ತಲುಪಿದ್ದೆವು. ಪ್ರೌಢ ಶಾಲಾ ವಿಭಾಗದಲ್ಲೂ ಸಹ ನಾಟಕ ಸೇರಿದಂತೆ 5 ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಬಂದಿದ್ದೆವು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸೀತೂರು ಗ್ರಾಪಂ ಅಧ್ಯಕ್ಷೆ ಸುನಂದ ವಹಿಸಿದ್ದರು. ಉಪಾಧ್ಯಕ್ಷ ಬಾಬುಪೂಜಾರಿ, ಸದಸ್ಯೆ ಅಶ್ವಿನಿ, ಸಿಆರ್ಪಿ ಪ್ರಸನ್ನ, ಅಧ್ಯಕ್ಷ ಎಸ್. ಅಶ್ವತ್ಥ್ ನಾರಾಯಣ, ಬೆಮ್ಮನೆ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಆರ್. ಗಣೇಶ್, ಬಾಲಕೃಷ್ಣ, ಅರುಣ್, ಬೋಗೇಶ್, ವೈ.ಕೆ. ಶ್ರೀನಿವಾಸ್ ಮುಂತಾದವರಿದ್ದರು. ಸಂಕದಕುಣಿ ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ 500 ಮಕ್ಕಳು ವಿವಿಧ 21ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.