ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ದಾಸರು ಒಂದು ಜಾತಿಗೆ ಸೀಮಿತರಲ್ಲ'

Lingaraj Badiger
Updated On : 10 Dec 2013, 10:37 am

ಕ.ಪ್ರ.ವಾರ್ತೆ, ಹಿರಿಯೂರು,  ಡಿ.9
ಕನಕದಾಸರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡದೇ ಎಲ್ಲ ಶೋಷಿತ ವರ್ಗದವರೂ ಸೇರಿ ಒಂದಾಗಿ ಜಯಂತಿ ಆಚರಿಸುವಂತಹ ವಾತಾವರಣ ರೂಪುಗೊಳ್ಳಬೇಕಿದೆ ಎಂದು ಕಾಗಿನೆಲೆ ಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಕೂಡ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರಂಥ ದಾಸ ಶ್ರೇಷ್ಠರ ಜಯಂತಿ ಆಚರಣೆ ಕ್ರಮೇಣ ಒಂದು ಸಮುದಾಯಕ್ಕೆ ಸೀಮಿತವಾಗುವ ಅಪಾಯವಿರುವುದರಿಂದ ಎಲ್ಲ ಜನವರ್ಗದವರಿಗೂ ಕನಕದಾಸರ ವಿಚಾರ, ಸಿದ್ಧಾಂತ, ಆಲೋಚನೆಗಳನ್ನು ತಲುಪಿಸುವ ಕೆಲಸವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಮಾನಗಳಲ್ಲಿ ಕೃಷ್ಣ, ಕನಕ, ಬುದ್ಧ, ಬಸವ, ಅಂಬೇಡ್ಕರ್‌ರಂತಹ ದಾರ್ಶನಿಕರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಪರಿಪಾಠವನ್ನು ಬೆಳೆಸಬೇಕಿದೆ ಎಂದು ತಿಳಿಸಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಕನಕದಾಸರು ಕೇವಲ ಕೀರ್ತನಕಾರರು, ಅಥವಾ ಆಧ್ಯಾತ್ಮ ಸಾಧಕರು ಎಂಬ ಭಾವನೆ ಇದೆ. ಆದರೆ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಾ ದುರ್ಬಲರ ಕಲ್ಯಾಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ ಮಹಾನ್ ಸಂತ ಎಂಬುದನ್ನು ನಾವು ಅರಿಯಬೇಕಿದೆ ಎಂದರು.
ಶಾಸಕ ಡಿ. ಸುಧಾಕರ್ ಮಾತನಾಡಿ, ಇನ್ನೊಂದು ವರ್ಷದೊಳಗೆ ಕೂಡ್ಲಹಳ್ಳಿ ಗ್ರಾಮದಲ್ಲಿ ಕನಕ ಭವನ ನಿರ್ಮಾಣ ಮಾಡಿಕೊಡಲು ಅಗತ್ಯ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು.
ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ನಿಶಾನಿ ಜಯಣ್ಣ, ಬಿಜೆಪಿ ಮುಖಂಡ ಬೇವಿನಹಳ್ಳಿ ಮಂಜುನಾಥ್, ಪ್ರದೇಶ ಕುರುಬರ ಸಂಘದ ಡಾ. ಎಂ.ಎಚ್. ಕೃಷ್ಣಮೂರ್ತಿ, ನಿರ್ದೇಶಕ ಟಿ. ಸುರೇಶ್ ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಪುರಸಭಾ ಸದಸ್ಯ ನಟರಾಜ್, ಪುಷ್ಪಾ ಪುಟ್ಟರಾಜು, ಗೋಡೆ ತಿಪ್ಪೇಸ್ವಾಮಿ, ಕೆ.
ಮಂಜುನಾಥ್, ಜೈರಾಂ, ಶ್ರೀನಿವಾಸ್, ಪ್ರಕಾಶ್, ಮೈಲಪ್ಪ, ತಿಪ್ಪೇಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement