ಪ್ರತಿಭಾ ಪುರಸ್ಕಾರ
ಚಿಕ್ಕಮಗಳೂರು: ನಗರದ ಎಂಇಎಸ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ವಿಪ್ರ ನೌಕರರ ಕ್ಷೇಮಾಭ್ಯುದಯ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಡೂರು ಶಾಸಕ ವೈಎಸ್.ವಿ. ದತ್ತ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಘದಿಂದ ಹೊರತರಲಾದ ನೂತನ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬದಲಾದ ಇಂದಿನ ಸನ್ನಿವೇಶದಲ್ಲಿ ವಿಪ್ರ ಸಮುದಾಯ ನಿರಾಂತಕವಾಗಿ ಮುಂದುವರೆಯಬೇಕಾದರೆ ಆ ವರ್ಗ ಸಂಘಟಿತವಾಗಬೇಕು ಎಂದು ಸಲಹೆ ಮಾಡಿದರು. ಶಾಸಕ ಸಿ.ಟಿ. ರವಿ ಮಾತನಾಡಿ, ಬ್ರಾಹ್ಮಣರು ಆರ್ಥಿಕವಾಗಿ ಬಡವರಾಗಿದ್ದರೂ ವಿದ್ಯೆಯಲ್ಲಿ ಶ್ರೀಮಂತರಾಗಿದ್ದು ಅವರ ಬುದ್ಧಿವಂತಿಕೆ ಸಮಾಜದ ಅಭಿವೃದ್ಧಿಗೆ ಇಂದು ಅಗತ್ಯವಾಗಿದೆ ಎಂದು ಹೇಳಿದರು.
ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ವಿದ್ಯಾರ್ಥಿವೇತನ ವಿತರಿಸುವುದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿಶೇಷ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎ.ವಿ. ಅನಂತರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅಟ್ಟಾವರ ರಾಮದಾದ್, ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್, ಜಿಲ್ಲಾ ಗೃಹ ರಕ್ಷಕದಳದ ಕಮಾಂಡೆಂಟ್ ಟಿ.ಕೆ. ಫಣಿರಾಜ್, ಶಿವಮೊಗ್ಗ ವಿಪ್ರ ನೌಕರರ ಸಂಘದ ಅಧ್ಯಕ್ಷ ಆರ್. ಅಚ್ಯುತರಾವ್, ನಾರಾಯಣಮೂರ್ತಿ ಇದ್ದರು.
ಕಾರ್ಮಿಕರಿಗೆ ತರಬೇತಿ
ಚಿಕ್ಕಮಗಳೂರು: ಕಟ್ಟಡ ನಿರ್ಮಾಣದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು, ಗುತ್ತಿಗೆದಾರರು ಮತ್ತು ಮನೆಯ ಮಾಲೀಕರ ಜೊತೆಗೆ ಉತ್ತಮ ಸಂಬಂಧ ಉಳಿಸಿಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಮಹಮ್ಮದ್ ಕಿಜರುಲ್ಲಾ ಹೇಳಿದ್ದಾರೆ. ನಗರದ ಕೋಟೆಯಲ್ಲಿ ಎಸಿಸಿ ಸಿಮೆಂಟ್ ಏರ್ಪಡಿಸಿದ್ದ ಕ್ಷೇತ್ರ ಮಟ್ಟದ ಕೆಲಸದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸಿಸಿ ಕಂಪನಿಯ ಟೆಕ್ನಿಕಲ್ ಮ್ಯಾನೇಜರ್ ಉಮೇಶ್ ಶೆಟ್ಟಿ ಮಾತನಾಡಿ, ತರಬೇತಿಯಲ್ಲಿ ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದು, ಕಾರ್ಮಿಕರು ಇದನ್ನರಿತು ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ತಿಳಿಸಿದರು. ಎಸಿಸಿ ಮತ್ತು ಲೇಬರ್ ನೆಟ್ ವತಿಯಿಂದ ಭಾಗವಹಿಸಿದ್ದ 63 ಕಾರ್ಮಿಕರಿಗೆ ಪ್ರಮಾಣ ಪತ್ರ ವಿತರಿಸಿ, ಎಸಿಸಿ ದೇಶದ ಹಳೆಯ ಕಂಪನಿಯಾಗಿದ್ದು, ಇದಕ್ಕೆ 76 ವರ್ಷಗಳ ಇತಿಹಾಸವಿದೆ ಎಂದು ತಿಳಿಸಿದರು.