ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಶಾಸಕ ಸುಧಾಕರ್
ಕ.ಪ್ರ.ವಾರ್ತೆ, ಹಿರಿಯೂರು, ಡಿ.9
ಕಳೆದ ಅವಧಿಯಲ್ಲಿ ತಾಲೂಕಿನ ಗ್ರಾಮಗಳ ಮೂಲ ಸೌಕರ್ಯ ಅಭಿವೃದ್ಧಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಸಂಬಂಧ ಅನುದಾನದ ಬಹುಪಾಲನ್ನು ವಿನಿಯೋಗಿಸಲಾಗಿದ್ದು, ಈ ಬಾರಿಯೂ ಆದ್ಯತೆ ನೀಡಲಾಗುವುದು ಎಂದು ಶಾಸಕ ಡಿ. ಸುಧಾಕರ್ ಹೇಳಿದರು.
ತಾಲೂಕಿನ ಯಲ್ಲದಕರೆಯಲ್ಲಿ ಸುವರ್ಣಗ್ರಾಮ ಯೋಜನೆಯಡಿ 5ನೇ ಹಂತದ ಕಾಮಗಾರಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸುವರ್ಣಗ್ರಾಮ ಯೋಜನೆಯಡಿ ಈವರೆಗೆ 4 ಹಂತದ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಪ್ರಸ್ತುತ 5ನೇ ಹಂತದ ಕಾಮಗಾರಿ ಆರಂಭಿಸಲು ಒಟ್ಟು ರು. 79.47 ಲಕ್ಷ ಮಂಜೂರು ಮಾಡಲಾಗಿದೆ ಎಂದರು.
ರು. 2.89 ಲಕ್ಷ: ಇದರಲ್ಲಿ ರಸ್ತೆ ಕಾಮಗಾರಿಗೆ ರು. 66.83 ಲಕ್ಷ, ಗ್ರಾಪಂ ಕಟ್ಟಡ ಕಾಮಗಾರಿಗೆ ರು. 19.75 ಲಕ್ಷಗಳು ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ರು. 2.89 ಲಕ್ಷ ನೀಡಲಾಗಿದೆ ಎಂದು ಹೇಳಿದರು.
ತಾಲೂಕು ಕೇಂದ್ರದಿಂದ 25 ಕಿ.ಮೀ.ಗೂ ಹೆಚ್ಚಿನ ದೂರವಿರುವ ಈ ಭಾಗದ ಗ್ರಾಮಗಳಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದ್ದನ್ನು ಕಂಡು ಇತರ ಭಾಗಗಳಿಗಿಂತ ಹೆಚ್ಚಿನ ಗಮನ ನೀಡಿ, ಅನುದಾನ ವ್ಯಯಿಸಲಾಗಿದೆ ಂದು ಹೇಳಿದರು.
ಏಕಲವ್ಯ ಶಾಲೆ ಮಂಜೂರು: ಹಾಗೆಯೇ ತಾಲೂಕಿನ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಈ ಭಾಗಕ್ಕೆ ಕೇಂದ್ರ ಸರ್ಕಾರದ ಅನುದಾನಕ್ಕೆ ಒಳಪಟ್ಟ ಏಕಲವ್ಯ ಶಾಲೆಯನ್ನು ಮಂಜೂರು ಮಾಡಲಾಗಿದ್ದು, ಕಟ್ಟಡ ಮತ್ತಿತರ ಕಾಮಗಾರಿ ಚಾಲನೆ ನೀಡಲು ಈಗಾಗಲೇ ಭೂಮಿ ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ವರ್ಗದ ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ವಿದ್ಯಾಭ್ಯಾಸ ಕಲ್ಪಿಸುವ ಸಂಬಂಧ ಏಕಲವ್ಯ ಶಾಲೆಯ ಯೋಜನೆ ರೂಪುಗೊಂಡಿದ್ದು, ಈ ವರ್ಗದ ಬಡಮಕ್ಕಳ ಭವಿಷ್ಯಕ್ಕೆ ನೆರವಾಗಲಿದೆ ಎಂದು ಹೇಳಿದರು.
ಜಿಪಂ ಸದಸ್ಯ ಎಚ್. ಚಂದ್ರಪ್ಪ, ಕರಿಯಮ್ಮ ಶಿವಣ್ಣ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಟ್ಟಿ ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷೆ ಮಾರಕ್ಕ ಮೊದಲಾದವರು ಇದ್ದರು.