ಪ್ರತಿಭಾ ಕಾರಂಜಿ ಪ್ರತಿಭೆಗಳ ಸಮಾಗಮ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಡಿ.10
ಪ್ರತಿಭೆಗಳ ಸಮಾಗಮ ಪ್ರತಿಭಾ ಕಾರಂಜಿ, ಮಕ್ಕಳ ಉತ್ತೇಜಕ ಶಕ್ತಿ ಪ್ರೇರಕ ಶಕ್ತಿಯೂ ಹೌದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಭುವನೇಂದ್ರ ವಿದ್ಯಾಸಂಸ್ಥೆ ಮಂಗಳವಾರ ನಗರದ ಬಿವಿಎಸ್ ಶಾಲಾವರಣದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಪ್ರೌಢಶಾಲಾ ಎ ವಲಯದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ, ಅನುದಾನಿತ, ಅನುದಾನ ರಹಿತ ಖಾಸಗಿ ಶಾಲೆಗಳ ಮಕ್ಕಳೆಲ್ಲಾ ಒಂದೆಡೆ ಕಲೆತು ಸಂಭ್ರಮಿಸುವ ಸಂದರ್ಭವಿದು. ಒಂದು ರೀತಿಯಲ್ಲಿ ಉತ್ತೇಜಕ ಮತ್ತು ಪ್ರೇರಕ ಶಕ್ತಿಯೂ ಹೌದು. ಜ್ಞಾನ, ಪ್ರತಿಭೆಗಳ ವಿನಿಮಯದ ಮೂಲಕ ಮಕ್ಕಳ ಮನಸ್ಸನ್ನು ಅರಳಿಸುವ ಕಾಲ. ಪ್ರತಿಭೆಯ ಸಿಂಚನ ಇಲ್ಲಿದೆ. ಜ್ಞಾನ ಎಲ್ಲೆಡೆಯಿಂದ ಸ್ವೀಕಾರಾರ್ಹ. ಜೀವನದಲ್ಲಿ ಗುರಿಯಿಟ್ಟುಕೊಂಡು ಬದುಕಬೇಕು ಎಂದರು.
ಓದು- ಬರಹ ಲೆಕ್ಕಾಚಾರ ಪ್ರಾಥಮಿಕ ಹಂತವಾದರೆ, ವ್ಯಕ್ತಿತ್ವ ರೂಪಿತಗೊಳ್ಳುವುದೇ ಪ್ರೌಢಹಂತದಲ್ಲಿ. ಪ್ರೌಢಶಾಲಾ ಮಕ್ಕಳಿಗೆ ಮಾರ್ಗದರ್ಶನ ಉತ್ತಮ ಶಿಕ್ಷಕರಿಂದ ಇಲ್ಲಿ ಸಿಗುತ್ತಿದೆ. ಡಿಸೆಂಬರ್ ತಿಂಗಳು ಸಹಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುತ್ತದೆ. ಪ್ರತಿಭಾ ಕಾರಂಜಿ, ಪ್ರವಾಸ, ವಾರ್ಷಿಕೋತ್ಸವ, ಕ್ರೀಡೋತ್ಸವಗಳು ನಡೆಯುತ್ತಿದ್ದು, ಜನವರಿಯಲ್ಲಿ ಪೂರ್ಣ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ರಾಜೇಗೌಡ, ಸಂತಸ ವಿನಿಮಯ ಹಾಗೂ ಶೈಕ್ಷಣಿಕ ಚಿಂತನೆಗೂ ಪೂರಕವಾದ ಪ್ರತಿಭಾ ಕಾರಂಜಿ ಅರ್ಥಪೂರ್ಣ ಆಚರಣೆ ಎಂದು ಹೇಳಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಉಮಾಮಹೇಶ್ ಮಾತನಾಡಿ, ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ, ಅದು ಸಾಧಕನ ಸ್ವತ್ತು. ಸಾಧನೆಗೆ ಫಲ ಸಿಗುತ್ತದೆ ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಚ್.ಎಂ. ಓಂಕಾರಪ್ಪ ವೇದಿಕೆಯಲ್ಲಿದ್ದರು. 18 ಪ್ರೌಢಶಾಲಾ ತಂಡಗಳು ಭಾಗವಹಿಸಿದ್ದು, ಸುಮಾರು 24 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಭುವನೇಂದ್ರ ಪ್ರೌಢಶಾಲೆಯ ಪ್ರಾಂಶುಪಾಲ ಬಿ. ವೀರಪ್ಪಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಲು-ಗೆಲುವುಗಳಿಗಿಂತ ಭಾಗವಹಿಸುವಿಕೆ, ಕ್ರೀಡಾಮನೋಭಾವ ಇಲ್ಲಿ ಪ್ರಧಾನವಾಗಬೇಕು. ರಾಜ್ಯಮಟ್ಟಕ್ಕೂ ಅರ್ಹರಾದ ಪ್ರತಿಭೆಗಳು ಮೂಡಿಬರಲಿ. ಮಕ್ಕಳಿಗೆ ತೃಪ್ತಿಯಾಗುವ ತೀರ್ಪು ಅಪೇಕ್ಷಣೀಯ ಎಂದರು.
ಶಿಕ್ಷಕಿ ಶೈಲಜಾ ಸ್ವಾಗತಿಸಿ, ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ಮುಖ್ಯೋಪಾಧ್ಯಾಯಿನಿ ಜಮಿಲಾಖಾನಂ ವಂದಿಸಿದರು.