ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದತ್ತಜಯಂತಿ: ಬೈಕ್ ರ್ಯಾಲಿ

Lingaraj Badiger
Updated On : 12 Dec 2013, 10:48 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಡಿ.11
ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನ ಹಾಗೂ ದತ್ತಜಯಂತಿ ಉತ್ಸವಕ್ಕೆ ಇನ್ನೆರೆಡೇ ದಿನ ಬಾಕಿ ಉಳಿದುಕೊಂಡಿದೆ.
ಒಂದೆಡೆ ಉತ್ಸವದ ಯಶಸ್ವಿಗೆ ಸಂಘಟನೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನೊಂದೆಡೆ ಜಿಲ್ಲಾಡಳಿತ ಭಕ್ತರಿಗೆ ಮೂಲಭೂತ ಸೌಲಭ್ಯ ಹಾಗೂ ಬಂದೋಬಸ್ತ್‌ಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ. ದತ್ತಮಾಲಾ ಹಾಗೂ ದತ್ತಜಯಂತಿ ಅಂಗವಾಗಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬುಧವಾರ ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು.
ಇಲ್ಲಿನ ರತ್ನಗಿರಿ ರಸ್ತೆಯ ಶ್ರೀರಾಮ ಮಂದಿರದಿಂದ ಹೊರಟ ಬೈಕ್ ರ್ಯಾಲಿಗೆ ದತ್ತಪೀಠ ಸಂವರ್ಧನಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಪೈ ಹಾಗೂ ವಿಎಚ್‌ಪಿ ಜಿಲ್ಲಾ ಖಜಾಂಚಿ ಯೋಗೀಶ್‌ರಾಜ್ ಅರಸ್ ಚಾಲನೆ ನೀಡಿದರು. ಬಳಿಕ ಈ ರ್ಯಾಲಿ ರತ್ನಗಿರಿ ರಸ್ತೆ, ಕೆಇಬಿ, ಬಸವನಹಳ್ಳಿ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ, ಬೇಲೂರು ರಸ್ತೆ, ಕೋಟೆ, ಹೊಸಮನೆ, ಐ.ಜಿ.ರಸ್ತೆ, ಮಲ್ಲಂದೂರು, ರಸ್ತೆ, ಉಪ್ಪಳ್ಳಿ, ವಿಜಯಪುರ ಮಾರ್ಗಗಳಲ್ಲಿ ಚಲಿಸಿ ಶ್ರೀರಾಮ ಮಂದಿರದಲ್ಲಿ ಮುಕ್ತಾಯಗೊಂಡಿತು. ರ್ಯಾಲಿಯಲ್ಲಿ ಸಂಘಟನೆಯ ಮುಖಂಡರು, ಕಾರ್ಯಕರ್ತರು ಹಾಗೂ ದತ್ತಮಾಲಾಧಾರಿಗಳು ಪಾಲ್ಗೊಂಡಿದ್ದರು.
3 ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಉತ್ಸವಕ್ಕೆ ಬಂದೋಬಸ್ತ್‌ಗಾಗಿ ನೆರೆಯ ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿಕೊಳ್ಳಲು ಜಿಲ್ಲಾ ರಕ್ಷಣಾ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇನ್ನು ಸಿಗದ ಅನುಮತಿ:  ಡಿ.5ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಧಾರ್ಮಿಕ ಸಭೆಯನ್ನು ನಡೆಸಲು ಇಲ್ಲಿನ ಆಜಾದ್ ಪಾರ್ಕ್ ವೃತ್ತದಲ್ಲಿ ಅನುಮತಿ ನೀಡುವಂತೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾಡಳಿತವನ್ನು ಕೋರಿದೆ. ಆದರೆ, ಜಿಲ್ಲಾಡಳಿತದಿಂದ ಈವರೆಗೆ ಗ್ರೀನ್ ಸಿಗ್ನಲ್ ಆಗಲೀ, ಅಥವಾ ಲಿಖಿತವಾಗಿ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಆದ್ದರಿಂದ ಈ ಸಂಬಂಧ ಸಂಘಟನೆಯ ಮುಖಂಡರು ಗುರುವಾರ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಸಿದ್ಧತೆ ಪರಿಶೀಲನೆ:  ವಾರ್ಷಿಕ ದತ್ತ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಅವರು ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾಕ್ಕೆ ಭೇಟಿ ನೀಡಿದ್ದರು.
ಜಿಲ್ಲಾ ರಕ್ಷಣಾಧಿಕಾರಿ ಅಭಿಷೇಕ್ ಗೋಯಲ್ ಸೇರಿದಂತೆ ವಿವಿಧ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಅವರು ಐ.ಡಿ.ಪೀಠದ ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಡಿ.14 ರಿಂದ 16 ರವರೆಗೆ ನಡೆಯಲ್ಲಿರುವ ದತ್ತಮಾಲಾ ಅಭಿಯಾನ ಮತ್ತು ದತ್ತ ಜಯಂತಿ ಉತ್ಸವಕ್ಕೆ ಆಗಮಿಸಲಿರುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದನ್ನು ಪರಿಶೀಲಿಸಿದರು.
ಭಕ್ತರಿಗೆ ವಸತಿ, ಕುಡಿಯುವ ನೀರು, ತಾತ್ಕಾಲಿಕ ಆಸ್ಪತ್ರೆ ವ್ಯವಸ್ಥೆ ಸೇರಿದಂತೆ ಅಂಬ್ಯುಲೆನ್ಸ್ ಮತ್ತಿತರ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದತ್ತಜಯಂತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ಆಯೋಜಿಸುವಂತೆ ಸೂಚಿಸಿದರು.
ನಗರದಿಂದ ಐ.ಡಿ.ಪೀಠಕ್ಕೆ ತೆರಳುವ ರಸ್ತೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ದತ್ತ ಜಯಂತಿ ಮುಗಿಯುವವರೆಗೂ ತಾತ್ಕಾಲಿಕವಾಗಿ ರಸ್ತೆ ಕಾಮಗಾರಿಯನ್ನು ನಿಲ್ಲಿಸುವಂತೆ ಹಾಗೂ ಕೈಮರ ಚೆಕ್ ಪೋಸ್ಟ್‌ನಲ್ಲಿ ವಾಹನ ನಿಲುಗಡೆಗೆ ಸ್ಥಳ ಮತ್ತು ಪ್ರವಾಸಿ ಮಾಹಿತಿ ಕೇಂದ್ರವನ್ನು ತೆರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಾಳಿ ಕೆರೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಥಳ ಪರಿಶೀಲನೆ ನಡೆಸಿದ ಅವರು, ಐ.ಡಿ. ಪೀಠ ಮಾರ್ಗದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಗುರುತಿಸಲು ತಹಸೀಲ್ದಾರರಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕೆ.ಪಿ.ಹೊನಕೇರಿ, ತಹಸೀಲ್ದಾರ್ ಶಿವೇಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ದತ್ತಜಯಂತಿ ಅಂಗವಾಗಿ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಬೈಕ್ ರ್ಯಾಲಿ ನಡೆಸಿದರು. ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ದತ್ತಪೀಠದಲ್ಲಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement