ನಿಸ್ವಾರ್ಥ ಸೇವೆಯಿಂದ ಸಾಮಾಜಿಕ ಗೌರವ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು, ಡಿ.11
ಸಂಘ ಸಂಸ್ಥೆಗಳು ನಿಸ್ವಾರ್ಥ ಸೇವೆ ಸಲ್ಲಿಸಿದಲ್ಲಿ ಸಮಾಜದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಬಹುದು ಎಂದು ರೋಟರಿ ಜಿಲ್ಲೆ 3180ರ ರಾಜ್ಯಪಾಲ ಎಸ್.ಗುರುರಾಜ್ ಹೇಳಿದ್ದಾರೆ.
ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ರಾಜ್ಯಪಾಲರ ಅಧಿಕೃತ ಭೇಟಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜ ಸೇವೆಯಲ್ಲಿ ಜವಾಬ್ದಾರಿ ತೆಗೆದುಕೊಂಡು ಮುಂದೆ ಸಾಗುವುದು ಸಂಸ್ಥೆಗೆ ದೊಡ್ಡ ಸವಾಲಾಗಿದೆ. ಪ್ರೀತಿ, ಸ್ನೇಹ, ಗೌರವದಿಂದ ಜನಸಾಮಾನ್ಯರನ್ನು ಕಂಡಾಗ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ವಿಶ್ವದ ಎಲ್ಲೆಡೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಯಾಗಿದೆ. 3 ರಾಷ್ಟ್ರಗಳಲ್ಲಿ ಮಾತ್ರ ಪೋಲಿಯೋ ಪೀಡಿತರು ಕಾಣಲಾಗುತ್ತಿದೆ. ರೋಗವನ್ನು ನಿರ್ಮೂಲನೆ ಮಾಡುವಲ್ಲಿ ರೋಟರಿ ಸಂಸ್ಥೆಯು ಜವಾಬ್ದಾರಿ ವಹಿಸಿಕೊಂಡಿದ್ದು, ಲಕ್ಷಾಂತರ ಜನರ ಬದುಕನ್ನು ಪರಿವರ್ತನೆ ಮಾಡುವಲ್ಲಿ ಸಂಸ್ಥೆ ಯಶಸ್ಸನ್ನು ಕಂಡಿದೆ ಎಂದರು.
ಸಮಾಜದಲ್ಲಿ ವಿಶಿಷ್ಟ ಸೇವೆ ಸಲ್ಲಿಸುವವರನ್ನು ಗುರುತಿಸುವುದು ಸಂಘ ಸಂಸ್ಥೆಗಳ ಕಾರ್ಯವಾಗಬೇಕು. ಆಧುನೀಕತೆಯ ಭರಾಟೆಯಲ್ಲಿ ಗುಡಿ ಕೈಗಾರಿಕೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಕುಂಬಾರಿಕೆ ವೃತ್ತಿಯನ್ನು ನಡೆಸಿಕೊಂಡು ಬರುತ್ತಿರುವ ಕೃಷ್ಣಪ್ಪ ಮೂಲ್ಯರನ್ನು ಸಂಸ್ಥೆಯು ಸನ್ಮಾನಿಸಿ ತನ್ನ ಗೌರವವನ್ನು ಇಮ್ಮಡಿಗೊಳಿಸಿಕೊಂಡಿದೆ ಎಂದರು.
ಸಹಾಯಕ ರಾಜ್ಯಪಾಲ ಡಾ. ಶರತ್ ಮಾತನಾಡಿ, ಸಮಾಜಮುಖಿ ಸೇವೆಯಲ್ಲಿ ಪ್ರಯತ್ನವಿಲ್ಲದೆ ಸಾಧನೆ ಮಾಡಲಾಗದು. ಸೇವೆಗಿಂತ ಮಿಗಿಲಾದ ವೃತ್ತಿ ಮತ್ತೊಂದಿಲ್ಲ ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎಂ.ಇಬ್ರಾಹಿಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಲಯಾಧಿಕಾರಿ ಎಚ್.ಎಸ್.ಮೋಹನ್, ಕಾರ್ಯದರ್ಶಿ ಕೆ.ಎಚ್. ನಾಗೇಶ್, ಸಿ.ಡಿ.ಹನುಮಂತಪ್ಪ, ಅಬ್ದುಲ್ ರಬ್, ಕೆ.ಟಿ. ವೆಂಕಟೇಶ್, ಜಾನ್ವಿಲ್ಸನ್ ಉಪಸ್ಥಿತರಿದ್ದರು.
ಬಾಳೆಹೊನ್ನೂರಿನ ರೋಟರಿ ಸಂಸ್ಥೆ ವತಿಯಿಂದ ಕುಂಬಾರಿಕೆ ವೃತ್ತಿಯ ಪರಿಣಿತ ಕೃಷ್ಣಪ್ಪ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.