ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ: ನಾಗರಾಜ್
ಬೀರೂರು: ವಿಶ್ವವಿಕಲ ಚೇತನ ದಿನಾಚರಣೆ ಸಂದರ್ಭದಲ್ಲಿ ಬೀರೂರು ಪಟ್ಟಣದ ಗುರುಭವನದಲ್ಲಿ ವಿಕಲ ಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಮಕ್ಕಳನ್ನು ಉತ್ತೇಜಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಸದಸ್ಯ ಬಿ.ಪಿ. ನಾಗರಾಜ್ ಮಾತನಾಡಿ, ಸಾಧನೆಗೆ ಅಂಗವೈಕಲ್ಯ ಎಂದೂ ಅಡ್ಡಿಯಾಗದು, ಸಾಧನಾ ಮನೋಭಾವ ಹಾಗೂ ಕ್ರಿಯಾಶೀಲ ಮನಸ್ಸಿನಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದನ್ನು ತಿಳಿಸಿ ಅನೇಕ ವಿಕಲಚೇತನರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆಗಳ ಮಾಹಿತಿ ನೀಡಿದರು.
ಮುಖ್ಯವಾಹಿನಿಗೆ ತನ್ನಿ; ಪೋಷಕರು ತಮ್ಮ ವಿಕಲ ಮಕ್ಕಳ ಬಗ್ಗೆ ಗೌರವ ಭಾವ ಹೊಂದಿ ಸಮಾಜದ ಮುಖ್ಯವಾಹಿನಿಯಿಂದ ದೂರವಿಡಲು ಪ್ರಯತ್ನಿಸಿದರೆ, ಆ ಮಕ್ಕಳ ಭವಿಷ್ಯ ಹಾಳು ಮಾಡುವುದರ ಜೊತೆ ಆ ಮಗುವಿನ ಪ್ರತಿಭೆಗೆ ಕೊಡಲಿ ಪೆಟ್ಟು ಬೀಳುತ್ತದೆ. ಈ ನಿಟ್ಟಿನಲ್ಲಿ ವಿಕಲ ಚೇತನರಿಗೆ ಅನುಕಂಪ ಬೇಡ. ನೇರವು ನೀಡಬೇಕೆಂದರು.
ಪ್ರಾಸ್ತಾವಿಕವಾಗಿ ಶಿಕ್ಷಕಿ ಮಂಗಳಮ್ಮ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ಕುಮಾರ್ ಮಾತನಾಡಿದರು.
ಬಿಆರ್ಸಿ ಪ್ರಕಾಶ್, ತಾಲೂಕು ಶಿಕ್ಷಕರ ಸಂಘದ ಬಸಪ್ಪ, ದೈಹಿಕ ಪರೀವೀಕ್ಷಕ ಎಂ. ಮಲ್ಲಪ್ಪ, ಶಿಕ್ಷಕ ಸಿ. ಕುಮಾರ್, ವಲಯದ ವಿವಿಧ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.