ಉತ್ತಮ ಆರೋಗ್ಯಕ್ಕೆ ಆಹಾರ ಶುದ್ಧಿ ಅಗತ್ಯ
ಕ.ಪ್ರ.ವಾರ್ತೆ, ಹೊಸನಗರ, ಡಿ.12 ಉತ್ತಮ ಆರೋಗ್ಯ ಹೊಂದಲು ಮಾನಸಿಕ ನೆಮ್ಮದಿ ಅಗತ್ಯ. ನೆಮ್ಮದಿ ಸಾಧಿಸಲು ಆಹಾರ ಶುದ್ಧಿ, ಪಥ್ಯ, ಜಪತಪ ನೆರವಾಗುತ್ತವೆ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀ ಹೇಳಿದರು.
ಹವ್ಯಕ ವಲಯ ಹಾಗೂ ನಗರ ಸುವರ್ಣ ಕ್ಲಿನಿಕ್ ಸಂಯುಕ್ತವಾಗಿ ರಾಮಚಂದ್ರಾಪುರದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಮತ್ತು ಆಯುರ್ವೇದ ಚಿಕಿತ್ಸಾ ಸಲಹಾ ಶಿಬಿರ ಉದ್ಘಾಟಿಸಿ, ದೈವ ವಿರೋಧವಿದ್ದಾಗಲೂ ನೆಮ್ಮದಿ ಇಲ್ಲದೆ ಅನಾರೋಗ್ಯ ಬಾಧಿಸುತ್ತದೆ ಆಗ ಕೇವಲ ಔಷಧ ಕೆಲಸ ಮಾಡದು ಮನಸ್ಸಿಗೆ ನೆಮ್ಮದಿ ನೀಡುವ ಅರ್ಚನೆ ಅಗತ್ಯವಾಗಬಹುದು ಎಂದರು.
ಆರೋಗ್ಯವಾಗಿರಲು ಆಹಾರ ಶುದ್ಧಿ ಅತ್ಯಂತ ಮುಖ್ಯ. ಕೆಲಮೊಮ್ಮೆ ಪಥ್ಯ ಕೂಡ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ. ಇನ್ನು ಧ್ಯಾನ ಜಪತಪಗಳು ಮನಸ್ಸಿನಲ್ಲಿ ಪ್ರಶಾಂತತೆ ಆವರಿಸಿ ವ್ಯಕ್ತಿಯ ದೇಹ ಸುಸ್ಥಿತಿಗೆ ಬರುತ್ತದೆ ಎಂದರು.
ಶಿಬಿರದಲ್ಲಿ ತಪಾಸಣೆ ನಡೆಸಿದ ಮಹಾರಾಷ್ಟ್ರದ ಆಯುರ್ವೇದ ನಾಡಿ ತಜ್ಞ ಸಚಿನ್, ವೈದ್ಯರಾದ ನಗರ ಚೈತನ್ಯ, ವಸಂತಕುಮಾರ್ ಕುಂಬ್ಳೆ ಇದ್ದರು. ವಲಯದ ಅಧ್ಯಕ್ಷ ವಡ್ಡಿನಬೈಲು ವೆಂಕಟೇಶ್, ಸಂಪೆಕಟ್ಟೆ ಕುಮಾರ್ ಮೊದಲಾದವರು ಇದ್ದರು. ವಿವಿಧ ಕಡೆಗಳಿಂದ ಆಗಮಿಸಿದ್ದ ನೂರಾರು ರೋಗಿಗಳು ತಪಾಸಣೆ ಹಾಗೂ ಚಿಕಿತ್ಸೆ ಪಡೆದರು.