ಕೃಷಿಯಲ್ಲಿ ಆಧುನಿಕ ಮಾದರಿ ಅಗತ್ಯ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಡಿ.9
ಬೆಳೆಯುವ ಭೂಮಿ ಕಡಮೆ ಆಗುತ್ತಿದ್ದು, ಉಣ್ಣುವ ಕೈಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಇರುವ ಕೃಷಿ ಭೂಮಿಯಲ್ಲಿಯೇ ಹೆಚ್ಚು ಬೆಳೆಯನ್ನು ಆಧುನಿಕ ಮಾದರಿ ಬೇಸಾಯದ ಮುಖಾಂತರ ಬೆಳೆದು ಆಹಾರದ ಕೊರತೆ ಹೋಗಲಾಡಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಸುಧೀರ್ ಕುಮಾರ್ ಬಂಟ್ವಾಳ್ ಸಲಹೆ ನೀಡಿದರು.
ಶಿರಾಳಕೊಪ್ಪ ಸಮೀಪದ ಬಿಳಕಿಯಲ್ಲಿ ತೊಗರ್ಸಿ ವಲಯ ಮಟ್ಟದ ಹಾಗೂ ವಲಯಗಳ ವ್ಯಾಪ್ತಿಯ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ನಡೆದ ಕೃಷಿ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಂತ್ರೋಪಕರಣಗಳ ಸಹಾಯ ಸಾವಯವ ಕೃಷಿ ಮುಖಾಂತರ ಶ್ರೀ ಪದ್ಧತಿ ಅಳವಡಿಕೆ ಮುಖಾಂತರ ಬೆಳೆಯುವ ಕಾರ್ಯ ಆಗಬೇಕಿದೆ ಎಂದರು.
ಲಾಭದಾಯಕವಾಗಿಸಬೇಕು; ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಕಾರ್ಯ ಮಾಡಲು ಸಾಧ್ಯವಿಲ್ಲವೆಂದು ಗ್ರಾಮಸ್ಥರು ಪಟ್ಟಣದ ಕಡೆ ಹೋಗುತ್ತಿದ್ದಾರೆ. ಕೃಷಿ ಮಾಡಬೇಕೆಂದರೆ ಅದನ್ನು ಲಾಭದಾಯಕವಾಗಿಸಬೇಕು ಆಧು ನೀಕತೆ ಅಳವಡಿಸಿಕೊಳ್ಳಬೇಕು. ಕೃಷಿಗೆ ಸಹಕಾರಿ ಆಗುವ ಸ್ವಉದ್ಯೋಗ, ಹೈನುಗಾರಿಕೆ ಮಾಡುವ ಮುಖಾಂತರ ಕೃಷಿಯಲ್ಲಿ ಆಗುವ ನಷ್ಟ ನೀಗಿಸಲು ಸಾಧ್ಯ ಎಂದರು.
ನಿಮಗಾಗಿ, ನಿಮ್ಮ ಭದ್ರತೆಗಾಗಿ, ನಿಮ್ಮ ಮಕ್ಕಳಿಗಾಗಿ ಹಾಗೂ ಗಾಂಧೀಜಿ ಅವರ ರಾಮರಾಜ್ಯದ ಕನಸನ್ನು ನನಸಾಗಿಸಲು ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸಾಲಸೌಲಭ್ಯ ಪಡೆದು ಅಭಿವೃದ್ಧಿ ಹೊಂದಿ, ಆದರೆ ಮುಂದಿನ ಜನಾಂಗ ಯಾವುದೇ ಕಾರಣಕ್ಕೂ ಸಾಲ ಮಾಡದ ಹಾಗೆ ಇರಬೇಕು ಎಂಬುದು ವೀರೇಂದ್ರ ಹೆಗ್ಗಡೆ ಅವರ ಆಸೆ ಎಂದರು.
ಖರ್ಚುವೆಚ್ಚ ಸಮ: ನಾಗರಾಜ ಗೌಡ ಮಾತನಾಡಿ, ಒಂದು ಎಕರೆ ಬತ್ತ ಬೆಳೆಯಲು ಇಂದು ಸಾಕಷ್ಟು ಖರ್ಚು ಬರುತ್ತಿದೆ. ಬೆಳೆಬಂದಾಗ ಗಮನಿಸಿದರೆ ಖರ್ಚು ವೆಚ್ಚ ಸಮನಾಗುತ್ತಿದೆ ಎಂದರು.
ಸಿಆರ್ಸಿ ಚಂದ್ರಾನಾಯ್ಕ ಮಾತನಾಡಿ, ಇಂದು ದೇಶದಲ್ಲಿ ಹೆಚ್ಚಾಗಿ ರೈತರು ಸರ್ಕಾರಿ ಗೊಬ್ಬರ ಬಳಸುತ್ತಿರುವುದರಿಂದ ಕೃಷಿ ಭೂಮಿಗಳು ಬರಡಾಗಿವೆ. ಈ ಸಂಗತಿ ಅರಿತು ರೈತರು ಸಾವಯವ ಕೃಷಿ ಮಾಡಬೇಕಿದೆ ಎಂದರು. ಪ್ರಗತಿಪರ ರೈತ ಲೋಕಪ್ಪ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ರಸಾಯನಿಕ ಗೊಬ್ಬರ ಬಳಕೆಯಿಂದ ಕೆಟ್ಟ ಪರಿಣಾಮದ ಜೊತೆ ನಮ್ಮ ಶಕ್ತಿ ಕುಂದುತ್ತಿದ್ದು, ಎಚ್ಚರ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಎಚ್ಚರಿಸಿದರು.
ಸಮಾವೇಶದಲ್ಲಿ ಸುಧಾರಿತ ಬತ್ತ, ಮೆಕ್ಕೆಜೋಳ ಬೇಸಾಯ ಹಾಗೂ ಲಾಭದಾಯಕ ಹೈನುಗಾರಿಕೆ ಎಂಬ ವಿಷಯದ ಗೋಷ್ಠಿಗಳಲ್ಲಿ ಹಾಲು ಉತ್ಪಾದಕ ಒಕ್ಕೂಟದ ಮಾಜಿ ಅಧ್ಯಕ್ಷ ರಾಜಶೇಖರ್ ಕೃಷಿ ಇಲಾಖೆಯ ಮಂಜುನಾಥ ಮೊದಲಾದವರು ಮಾತನಾಡಿದರು.
ಒಕ್ಕೂಟಗಳ ಅಧ್ಯಕ್ಷ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಧ.ಗ್ರಾ. ಯೋಜನೆ ಯೋಜನಾಧಿಕಾರಿ ಸುರೇಶ್ ಭಾಗವಹಿಸಿದ್ದರು. ವಿವಿಧ ಗ್ರಾಪಂ ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘಗಳ ವಲಯ ಅಧ್ಯಕ್ಷರು ಭಾಗವಹಿಸಿದ್ದರು.