ಕೊಪ್ಪಕ್ಕೂ ಒಡೆಯರ್ ಮನೆತನದ ನಂಟು
ಕ.ಪ್ರ.ವಾರ್ತೆ ಟಿ ಕೊಪ್ಪ ಟಿ ಡಿ.12
ತಾಲೂಕಿಗೂ ಮೈಸೂರು ಒಡೆಯರ್ ರಾಜಮನೆತನಕ್ಕೂ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು ಎಂದು ಅಲಿಗೆ ವಿವೇಕಾನಂದ ತಿಳಿಸಿದರು.
ಕೊಪ್ಪ ತಾಲೂಕು ಮೈಸೂರು ಸಂಸ್ಥಾನದ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು. 1883ರಲ್ಲಿ ಪ್ರಜಾಪ್ರತಿನಿಧಿ ಸಭೆ ರೂಪುಗೊಂಡಾಗ ಅಲಿಗೆ ಗಣಪಯ್ಯ ಅವರು ತಾಲೂಕಿನಿಂದ ಮೊದಲ ಸದಸ್ಯರಾಗಿ ನೇಮಕಗೊಂಡಿದ್ದರು. ತದನಂತರದಲ್ಲಿ ಸಭೆ ಸದಸ್ಯರಾಗಿ ಬೆಟಗೆರೆ ಕೃಷ್ಣಭಟ್, ಮರಿತೋಟ್ಲು ರಾಮೇಗೌಡ, ಹೊಸಕೊಪ್ಪ ಕೃಷ್ಣ ಭಟ್.ಚಾವಲ್ಮನೆ ಸುಬ್ಬಣ್ಣ ನಾಯ್ಕ, ಡಿ.ಸುಬ್ಬಣ್ಣ, ಎಂ.ಎಸ್. ದ್ಯಾವೇಗೌಡರು ಸೇರಿದಂತೆ ಮತ್ತಿತರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು ಎಂದರು.
ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಇಲ್ಲಿಗೆ ಬಂದ ಸಂದರ್ಭದಲ್ಲಿ ಎಂ.ಎಸ್. ದ್ಯಾವೇಗೌಡರ ಮನೆಯಲ್ಲಿ ತಂಗುತ್ತಿದ್ದರು. ಇವರ ಮಾರ್ಗದರ್ಶನದಲ್ಲಿ ಮೈಸೂರು ಟೌನ್ಹಾಲ್ ಮಾದರಿಯ ಟೌನ್ಹಾಲ್ ಅನ್ನು ಕೊಪ್ಪದಲ್ಲಿ ನಿರ್ಮಾಣ ಮಾಡಿ ಮುಂಭಾಗದಲ್ಲಿ ಕಾರಂಜಿ ಕೊಳ ಹಾಗೂ ಬಾಗಿಲಿಗೆ ಬೆಳ್ಳಿಯ ಚಿಲಕವನ್ನು ಮಾಡಿಸಲಾಗಿತ್ತು. ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಪಾಲುಗೊಂಡಿದ್ದರು ಎನ್ನುವುದಕ್ಕೆ ಟೌನ್ಹಾಲ್ನ ಉದ್ಘಾಟನಾ ನಾಮಫಲಕದಲ್ಲಿ ಇಸ್ಮಾಯಿಲ್ ಅವರ ಹೆಸರಿರುವುದು ಸಾಕ್ಷಿಯಾಗಿದೆ ಎಂದರು.
ಇವರ ಸಲಹೆ ಮೇರೆಗೆ ಸಾರಿಗೆ ವ್ಯವಸ್ಥೆಯನ್ನು ಎಂ.ಎಸ್. ದ್ಯಾವೇಗೌಡರ ಒದಗಿಸಿದ್ದರ ಜೊತೆಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದರು. ಇವರ ಸಮಾಜ ಸೇವೆಯನ್ನು ಗುರುತಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರಿಗೆ ಲೋಕಸೇವಾನಿರತ ಎಂಬ ಬಿರುದು ನೀಡಿ ಪುರಸ್ಕರಿಸಿದ್ದರು. ತಾಲೂಕಿನ 80 ದೇವಸ್ಥಾನಗಳಿಗೆ ತಾಸ್ಥೀಕ್ ಹಣವಲ್ಲದೇ ಪ್ರತ್ಯೇಕವಾಗಿ ದೇವರ ಪೂಜೆಗೆ ಹಣವನ್ನು 1972 ವರೆಗೆ ಕಳುಹಿಸಿಲಾಗುತ್ತಿತ್ತು. ಸಂಸ್ಥಾನಕ್ಕೆ ಆದಾಯ ಕಡಿಮೆಯಾದ ನಂತರದಲ್ಲಿ ನಿಲ್ಲಿಸಲಾಗಿತ್ತು. ಜಯಚಾಮರಾಜೇಂದ್ರ ಒಡೆಯರ್ ಅವರು ತಾಲೂಕಿಗೆ ಭೇಟಿ ನೀಡಿದ ಜ್ಞಾಪಕಾರ್ಥವಾಗಿ ಸೊಳ್ಳೇ ಬೈಲು ಎಂಬ ಪಟ್ಟ ಪಟ್ಟಣಕ್ಕೆ ಜಯಪುರ ಎಂದು ನಾಮಕಾರಣ ಮಾಡಲಾಗಿತ್ತು ಎಂದು ತಿಳಿಸಿದರು.