ತಾಲೂಕುಮಟ್ಟದಲ್ಲಿ ಡಯಾಲಿಸಿಸ್ ಕೇಂದ್ರ
ಕಡೂರು: ಕಿಡ್ನಿ ವೈಫಲ್ಯದ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿ ತಾಲೂಕುಮಟ್ಟದಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯುವುದು ಸೇರಿದಂತೆ ರೋಗಿಗಳ ವಿವಿಧ ಬೇಡಿಕೆ ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ಈಡೇರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಭರವಸೆ ನೀಡಿದ್ದಾರೆ ಎಂದು ಕಡೂರು ಮಾನಸ ಮಹಿಳೆಯರ ಸ್ವಉದ್ಯೋಗ ತರಬೇತಿ ಸಂಸ್ಥೆ ಹೇಳಿದೆ.
ಈ ಕುರಿತು ಸಂಸ್ಥೆಯ ಸಂಚಾಲಕ ಕಡೂರು ದೇವೇಂದ್ರ, ಪದಾಧಿಕಾರಿ ದೇವನೂರು ಎಸ್. ರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ಸಾವಿರಾರು ಜನರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದು ಸಂಪೂರ್ಣ ಗುಣಪಡಿಸಲಾಗದ ಕಾಯಿಲೆ. ಡಯಾಲಿಸಿಸ್ ಮಾತ್ರ ಅವರ ಜೀವಿತದವರೆಗೆ ಬದುಕಿಸಬಲ್ಲ ಏಕೈಕ ಆಶಾಕಿರಣ. ಸದರಿ ಚಿಕಿತ್ಸೆ, ಇದಕ್ಕೆ ಸಂಬಂಧಿಸಿದ ಔಷಧಿ ದುಬಾರಿಯಾಗಿದೆ. ಈ ರೋಗಿಗಳು ದೈಹಿಕವಾಗಿ ಅಸಮರ್ಥರಾಗಿರುತ್ತಾರೆ ಎಂದರು.
ಚಿಕಿತ್ಸೆಗೆ ರಾಜ್ಯದ ಕೆಲವೇ ಕಡೆ ಡಯಾಲಿಸಿಸ್ ಸೌಲಭ್ಯಕ್ಕಾಗಿ ಬೆಂಗಳೂರಿನಂತಹ ದೂರದ ಊರುಗಳಿಗೆ ತೆರಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಕಿಡ್ನಿ ವೈಫಲ್ಯ ರೋಗಿಗಳ ಕುರಿತು ಸಂಸ್ಥೆ ಮಾಡುತ್ತಿರುವ ಹೋರಾಟ ಹಾಗೂ ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಸರ್ಕಾರದ ಗಮನ ಸೆಳೆಯಲು ರೋಗಿಗಳೊಂದಿಗೆ ನಡೆಸಿದ ಪ್ರತಿಭಟನೆಯನ್ನು ಸಚಿವರ ಗಮನಕ್ಕೆ ತಂದು ಆಗಬೇಕಾಗಿರುವ ಬೇಡಿಕೆಗಳ ಕುರಿತು ಮನವರಿಕೆ ಮಾಡಿ ಸಚಿವರಿಗೆ ಮನವಿ ಸಲ್ಲಿಸಲಾಯಿತು ಎಂದರು.
ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರಿಗೆ ನೀಡಿದ ಮನವಿಯಂತೆ ಕಿಡ್ನಿ ವೈಫಲ್ಯದ ರೋಗಿಗಳ ಡಯಾಲಿಸಿಸ್ಗೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯುವಂತೆ, ಉಚಿತ ಬಸ್ ಪಾಸ್ ಮತ್ತು ರೇಲ್ವೆ ಪಾಸ್ ನೀಡಿಕೆ, ರೋಗಿಗಳ ಜೀವನ ನಿರ್ವಹಣೆಗೆ ಮಾಸಿಕ ಧನಸಹಾಯ, ರೋಗಿಗಳ ಜೀವಿತ ಕಾಲದಲ್ಲಿ ಬಹಳಷ್ಟು ಖರ್ಚು ಭರಿಸಬೇಕಿರುವುದರಿಂದ ಅವರ ನಿಧನದ ನಂತರ ಅವರ ಕುಟುಂಬಕ್ಕೆ ವಿಮೆ ಮಾದರಿ ಅನುದಾನ ಕೊಡಿಸುವುದು, ಕಿಡ್ನಿ ವೈಫಲ್ಯದ ರೋಗಿಗಳನ್ನು ವಿಕಲಚೇತನರೆಂದು ಪರಿಗಣಿಸುವುದು ಸೇರಿದಂತೆ ಡಯಾಲಿಸಿಸ್ ತಜ್ಞವೈದ್ಯರು ಹಾಗೂ ತಂತ್ರಜ್ಞರ ನೇಮಕ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಲಾಯಿತು ಎಂದು ವಿವರಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎ.ಮಣಿ, ಮಾನಸ ಮಹಿಳೆಯರ ಸ್ವ ಉದ್ಯೋಗ ಸಂಸ್ಥೆಯ ಪದಾಧಿಕಾರಿಗಳಾದ ಎಸ್.ಪಿ.ಜ್ಯೋತಿ, ಕೆ.ಜೆ. ರಾಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.