ದತ್ತಪೀಠ ಹೋರಾಟದಲ್ಲಿ ರಾಜಿಗೆ ಅವಕಾಶವಿಲ್ಲ
ವಿಹಿಂಪ ರಾಜ್ಯ ಕಾರ್ಯದರ್ಶಿ ಕೇಶವ ಹೆಗಡೆ, ಭದ್ರಶ್ರೀಗಳಿಂದ ದತ್ತ ಭಕ್ತರಿಗೆ ಮಾಲಾಧಾರಣೆ
ಕ.ಪ್ರ.ವಾರ್ತೆ ಟಿ ಕಡೂರು ಟಿ ಡಿ.12
ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಪೂಜೆ, ದತ್ತ ಪಾದುಕೆಯ ಶಾಶ್ವತ ಪ್ರತಿಷ್ಠಾಪನೆ ಸೇರಿದಂತೆ ಹಿಂದೂಗಳ ಶ್ರದ್ಧಾಕೇಂದ್ರ ದತ್ತಪೀಠದ ಹೋರಾಟದಲ್ಲಿ ಯಾವುದೇ ರಾಜಿಯಿಲ್ಲ ಎಂದು ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.
ಪಟ್ಟಣದ ಕೆ.ಎಂ. ರಸ್ತೆಯ ಅಯ್ಯಪ್ಪಸ್ವಾಮಿ ಮಂದಿರದಲ್ಲಿ ದತ್ತಭಕ್ತರಿಗೆ ಭದ್ರ ಸ್ವಾಮೀಜಿ ಮಾಲಾಧಾರಣೆ ಮಾಡಿದ ಸಂದರ್ಭ ಮಾತನಾಡಿದ ಅವರು, 1999 ರಿಂದಲೂ ಕೂಡ ದತ್ತ ಪೀಠದಲ್ಲಿ ನಡೆಯವ ಧಾರ್ಮಿಕ ಕಾರ್ಯಗಳು ಭಜರಂಗದಳದ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗುತ್ತಿವೆ ಎಂದರು.
ಪ್ರತಿ ಬಾರಿ ಕನಿಷ್ಠ 10 ಸಾವಿರ ದತ್ತ ಭಕ್ತರು ಪೀಠಕ್ಕೆ ಭೇಟಿ ನೀಡುವ ಮೂಲಕ ಧಾರ್ಮಿಕ ಶ್ರದ್ಧೆಯನ್ನು ಮೆರೆಯುತ್ತಿದ್ದಾರೆ. ದೇವರು ಧರ್ಮ ಮತ್ತು ಸನಾತ ಕಾಲದಿಂದಲೂ ಬೆಳೆದು ಬಂದಿರುವ ಧರ್ಮ ಜಾಗೃತಿ ಪರಿಪಾಲನೆ ಮತ್ತು ಹಿಂದೂ ಧರ್ಮದ ಪರಂಪರೆ ಮುಂದುವರಿಸಿಕೊಂಡು ಹೋಗುವುದು ದತ್ತಜಯಂತಿಯ ಪ್ರಮುಖ ಉದ್ದೇಶವಾಗಿದೆ. ನಾವು ಯಾವುದೇ ಧರ್ಮದ ವಿರುದ್ಧ ಹೋರಾಟ ಮಾಡುತ್ತಿಲ್ಲ ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆಯೇ ವಿನಹ ಯಾವುದೇ ಧರ್ಮದ ವಿರುದ್ಧ ನಮ್ಮ ಹೋರಾಟವಲ್ಲ. 20 ವರ್ಷದಿಂದಲೂ ದತ್ತಪೀಠದ ಹೋರಾಟದ ಆಂದೋಲನ ನಡೆಯುತ್ತಲೇ ಇದೆ. ಪೀಠದಲ್ಲಿ ತ್ರಿಕಾಲ ಪೂಜೆ, ಶಾಶ್ವತ ಪಾದುಕೆ ಪ್ರತಿಷ್ಠಾಪನೆ, ಅರ್ಚಕರ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮುಂದುರಿಯುತ್ತಲೇ ಇದೆ ಎಂದರು.
ಅದೇ ರೀತಿ ಈ ಬಾರಿಯೂ ಕೂಡ ರಾಜ್ಯದ ಎಲ್ಲೆಡೆಯಿಂದ ಸುಮಾರು 15 ಸಾವಿರಕ್ಕೂ ಹೆಚ್ಚು ದತ್ತಮಾಲಾಧಾರಿಗಳೂ ಸೇರಿದಂತೆ ಹಿಂದೂ ಧರ್ಮ ಅನುಸರಿಸುವ ಭಕ್ತರೂ ಕೂಡ ಪಾಲ್ಗೊಳ್ಳಲಿದ್ದಾರೆ. ಈ ದತ್ತ ಜಯಂತಿಗೆ ಕೆಲವೊಮ್ಮೆ ರಾಜಕೀಯ ಲೇಪನ ಬಳಸುವ ಪ್ರವೃತ್ತಿ ನಡೆದಿದೆ. ಆದರೆ, ರಾಜಕೀಯವೇ ಬೇರೆ, ಧಾರ್ಮಿಕ ಹೋರಾಟವೇ ಬೇರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ದತ್ತಪೀಠದ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ದತ್ತಪೀಠಕ್ಕೆ ತೆರಳುವ ರಸ್ತೆಗಳ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ದತ್ತಪೀಠದಲ್ಲೂ ಅಭಿವೃದ್ಧಿ ಕಾರ್ಯ ನಡೆಯತ್ತಿದೆ ಎಂದರು.
ದತ್ತಮಾಲಾಧಾರಿಗಳು 5 ದಿನ ಕಾಲ ಶ್ರದ್ಧಾಭಕ್ತಿಯಿಂದ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದೇವರ ಭಜನೆ ಮಾಡುವ ಮೂಲಕ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ ಮಾಡಿಕೊಳ್ಳಲು ದತ್ತ ಜಯಂತಿ ನೆರವಾಗಲಿದೆ. ಕಡೂರು ತಾಲೂಕಿನಿಂದಲೂ ಹೆಚ್ಚನ ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳು ಜಯಂತಿಯಲ್ಲಿ ಭಾಗವಹಿಸಲಿದ್ದಾರೆ ಎಂದ ಕೇಶವ ಹೆಗಡೆ, ಡಿ.14ರಂದು ದತ್ತಪೀಠದಲ್ಲಿ ಅನಸೂಯಾದೇವಿ ಪೂಜೆ ನಡೆಯಲಿದೆ. 15ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಯಲಿದೆ 16ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಮತ್ತು ಧರ್ಮ ಕ್ಷೇತ್ರಗಳ ದರ್ಶನ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ದತ್ತಭಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಎಚ್. ಶಂಕರ್, ನಗರ ಘಟಕದ ಅಧ್ಯಕ್ಷ ಎ.ಮಣಿ, ಕುರುಬಗೆರೆ ಮಹೇಶ್, ಕೇಬಲ್ ಜಗದೀಶ್, ರಘು, ಮಧು, ಕುಮಾರಪ್ಪ ಮತ್ತಿತರರು ಉಪಸ್ಥಿತರಿದ್ದರು.