ಪಡಿತರ ಬಿಡುಗಡೆ
ಚಿಕ್ಕಮಗಳೂರು: ಡಿಸೆಂಬರ್ನಲ್ಲಿ ಜಿಲ್ಲೆಯ ಪೊಲೀಸ್ ಸಿಬ್ಬಂದಿ, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಗ್ನಿಶಾಮಕ ಠಾಣಾಧಿಕಾರಿ ಹಾಗೂ ಅವರಿಗಿಂತ ಕೆಳದರ್ಜೆಯ ಸಿಬ್ಬಂದಿಗೆ ಹಾಗೂ ಗೃಹ ರಕ್ಷಕ ಇಲಾಖೆ ಕಾರ್ಯನಿರ್ವಾಹಕ ಸಿಬ್ಬಂದಿ ಎ.ಪಿ.ಎಲ್. ಪಡಿತರ ಚೀಟಿದಾರರಿಗೆ 30 ಕೆ.ಜಿ. ಗೋಧಿ ಬಿಡುಗಡೆ ಮಾಡಲಾಗಿದೆ. ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯಿಂದ ತಿಂಗಳ ಒಳಗೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾ ಕಾರಂಜಿ
ನರಸಿಂಹರಾಜಪುರ: ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಶೆಟ್ಟಿಕೊಪ್ಪದ ಬರ್ಕ್ಮನ್ ಪ್ರೌಢಶಾಲೆ ಆಶ್ರಯದಲ್ಲಿ ಡಿ. 13 ರ ಶುಕ್ರವಾರ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಭದ್ರಾವತಿಯ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಜೋಸೆಫ್ ಅರುಮ ಚಾಡತ್ ಉದ್ಘಾಟಿಸಲಿದ್ದಾರೆ. ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದ್ದು, ಜನಪ್ರತಿನಿಧಿಗಳು ಭಾಗವಹಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಿದ್ದಾರೆ.
ಅಹವಾಲು ಸ್ವೀಕಾರ
ಚಿಕ್ಕಮಗಳೂರು: ಆಹಾರ ಭದ್ರತೆ ಯೋಜನೆಗಳಾದ ಸಾರ್ವಜನಿಕ ವಿತರಣಾ ಪದ್ಧತಿ ಐ.ಸಿ.ಡಿ.ಎಸ್. ಕೂಲಿಗಾಗಿ ಕಾಳು, ಮಧ್ಯಾಹ್ನ ಉಪಹಾರ ಯೋಜನೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಡಿ.13ರ ಬೆಳಗ್ಗೆ 10 ಗಂಟೆಗೆ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು, ಜಿಪಂ ಚಿಕ್ಕಮಗಳೂರು ಅವರನ್ನು ಒಳನ್ನೊಳಗೊಂಡ ಸದಸ್ಯರ ಸಮಿತಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದೆ.