ಮಗು-ನಗು ಆ್ಯಂಬುಲೆನ್ಸ್ ಸೇವೆಗೆ ಚಾಲನೆ
ಕ.ಪ್ರ.ವಾರ್ತೆ ಟಿ ತರೀಕೆರೆ ಟಿ ಡಿ.12
ಮಹಿಳೆಯರ ಒಳಿತಿಗಾಗಿ ಹಲವು ವಿನೂತನ ಯೋಜನೆಗಳನ್ನು ಹಮ್ಮಿಕೊಂಡಿರುವ ಸರ್ಕಾರ, ಇದೀಗ ಗರ್ಭಿಣಿಯರ ಅನುಕೂಲಕ್ಕೆ 'ಮಗು-ನಗು' ನೂತನ ಆ್ಯಂಬುಲೆನ್ಸ್ ಸೇವೆ ಕಲ್ಪಿಸಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗುರುವಾರ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಡಯಾಲಿಸಿಸ್ ಕೇಂದ್ರ- ಸುಸಜ್ಜಿತ ಕಟ್ಟಡ ಹೊಂದಿರುವ ಸಾರ್ವಜನಿಕ ಆಸ್ಪತ್ರೆಗೆ ಇನ್ನೂ ಹಲವಾರು ಸೌಲಭ್ಯಗಳು ದೊರಕಬೇಕಾಗಿದೆ. ಕೇವಲ ಜಿಲ್ಲಾಮಟ್ಟದ ಆಸ್ಪತ್ರೆಗೆ ಮಾತ್ರವೇ ಸೀಮಿತವಾಗಿದ್ದ ಡಯಾಲಿಸಿಸ್ ಕೇಂದ್ರವನ್ನು ಸದರಿ ಆಸ್ಪತ್ರೆಗೂ ಮಂಜೂರು ಮಾಡಿಸಲಾಗಿದೆ ಎಂದರು.
ವೈದ್ಯರ ಮನವಿಯಂತೆ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಇತರ ಸಂಬಂಧಿಕರು ಊಟ ಮಾಡಲು ಅನುಕೂಲವಾದ ವ್ಯವಸ್ಥೆ ಮಾಡಿಕೊಡುವ ಉದ್ದೇಶದಿಂದ ಕಟ್ಟಡ ನಿರ್ಮಿಸಲು ಶಾಸಕರ ಅನುದಾನದಿಂದ 3 ಲಕ್ಷ ನೀಡಲಾಗುವುದು ಎಂದು ತಿಳಿಸಿದರು.
ಸುರಕ್ಷತೆ- ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ದೇವರಾಜ್ ಮಾತನಾಡಿ, ಹೆರಿಗೆ ಆಸ್ಪತ್ರೆಗೆ ದಾಖಲಾಗುವವರನ್ನು ಹೆಚ್ಚಿನ ಚಿಕಿತ್ಸೆಗೆ ಬೇರೊಂದು ಆಸ್ಪತ್ರೆಗೆ ಸಾಗಿಸುವ ಕಾರ್ಯ ಈ ಆ್ಯಂಬುಲೆನ್ಸ್ಗೆ ಸೇರಿದೆ. ಮುಂದಿನ ದಿನಗಳಲ್ಲಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಅವರವರ ಮನೆಗೆ ತಲುಪಿಸುವ ವ್ಯವಸ್ಥೆ ರೂಪಿಸಲಾಗುವುದು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಅನುರಾಧ, ಸಿಡಿಪಿಒ ಶ್ರೀಧರ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನಪ್ಪ, ಡಾ.ಶಿವಮೂರ್ತಿ, ಡಾ.ರವಿಕೀರ್ತಿ, ಕಾಂಗ್ರೆಸ್ ಮುಖಂಡರಾದ ರವಿ ಶಾನುಭೋಗ್, ಹೇಮಲತಾ, ಎಚ್.ಯು.ಫಾರೂಕ್, ಪುರಸಭಾ ಸದಸ್ಯ ಪದ್ಮರಾಜ್ ಮತ್ತಿತರರು ಭಾಗವಹಿಸಿದ್ದರು.