ರಾಷ್ಟ್ರಮಟ್ಟಕ್ಕೆ ಬಾಳೆಹೊನ್ನೂರು ಮಕ್ಕಳು ಆಯ್ಕೆ
ಬಾಳೆಹೊನ್ನೂರು: ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ನಡೆದ ರಾಜ್ಯಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ್ದ ಇಲ್ಲಿನ ಬಾಳೆಹೊನ್ನೂರು ವಿದ್ಯಾಸಂಸ್ಥೆಯ (ಬಿಇಎಸ್) ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾಸಂಸ್ಥೆಯ ಜಗದ್ಗುರು ರೇಣುಕಾಚಾರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 9ನೇ ತರಗತಿಯ ವಿದ್ಯಾರ್ಥಿ ಕೆ.ಜೆ. ಜೀವನ್ ತಂಡ ವಿಜ್ಞಾನ ಶಿಕ್ಷಕ ಬಿ.ಎಸ್. ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ ಸಂಶೋಧನಾತ್ಮಕ ಪ್ರಾಜೆಕ್ಟ್ ಗ್ರಾಮೀಣ ಜನರ ಮನೆ ಬಳಕೆಗಾಗಿ ಕಿರು ಜಲ ವಿದ್ಯುತ್ ಒಂದು ಅಧ್ಯಯನ ರಾಜ್ಯಮಟ್ಟದಲ್ಲಿ ಆಯ್ಕೆಗೊಂಡಿದೆ. ಡಿ.27 ರಿಂದ 31 ರವರೆಗೆ ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶದಲ್ಲಿ ಕೆ.ಜೆ. ಜೀವನ್ ತನ್ನ ಪ್ರಾಜೆಕ್ಟನ್ನು ಮಂಡಿಸಲಿದ್ದಾನೆ. ಈ ವಿದ್ಯಾಸಂಸ್ಥೆಯ ಮಕ್ಕಳು ಪ್ರತೀ ವರ್ಷ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಜಿಲ್ಲಾಮಟ್ಟದಲ್ಲಿ ಆಯ್ಕೆಗೊಂಡು ರಾಜ್ಯಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ. 2ನೇ ಬಾರಿ ರಾಜ್ಯಮಟ್ಟದಲ್ಲಿ ಆಯ್ಕೆಗೊಂಡು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ.
ರಾಷ್ಟ್ರಮಟ್ಟಕ್ಕೆ ಕೀರ್ತಿ: ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಮೀಪದ ಮಾಗುಂಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಕೀರ್ತಿ 1500 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.