ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೇಂದ್ರದ ಅಡಕೆ ನೀತಿ ಅವೈಜ್ಞಾನಿಕ

Rashmi Kasaragodu
Updated On : 14 Dec 2013, 10:34 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಡಿ.13
ಅಡಕೆ ವಿಷಪೂರಿತ ವಸ್ತು ಎಂದು ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿರುವುದು ಹಾಗೂ ಪಶ್ಚಿಮಘಟ್ಟ ಪ್ರದೇಶವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿರುವುದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ ಜನರಿಗೆ ಕೊಟ್ಟ ಮರಣ ಶಾಸನದ ಕೊಡುಗೆ ಎಂದು ಶಾಸಕ ಸಿ.ಟಿ. ರವಿ ಆರೋಪಿಸಿದರು.
ಅಡಕೆ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಯ ಪ್ರತೀಕ. ಕೇಂದ್ರ ಸರ್ಕಾರ ಅಡಕೆ ವಿಷಪೂರಿತ ಎಂದು ಸುಳ್ಳು ಹೇಳಿ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಂತೆ ವರ್ತಿಸಿ, ಅಡಕೆ ಬೆಳೆಯುವ ಒಂದು ವರ್ಗದ ರೈತರಿಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಶುಕ್ರವಾರ ಟೀಕಿಸಿದರು.
ಹೆಚ್ಚದ ಅನುಮಾನ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಡಕೆ ಬೆಳೆಗಾರರ ಪರವಾಗಿ ಸುಪ್ರೀಂಕೋರ್ಟ್ಗೆ ಸರ್ಕಾರ ನ್ಯಾಯಾವಾದಿಗಳನ್ನು ನೇಮಕ ಮಾಡಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ನ್ಯಾಯಾವಾದಿಗಳನ್ನು ವಾಪಸ್ಸು ಕರೆಸಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.
ರಾಜ್ಯದ 8 ಜಿಲ್ಲೆಯ ಲಕ್ಷಾಂತರ ರೈತರಿಗೆ ಅಡಕೆ ಆರ್ಥಿಕ ಬೆಳೆ, ಇಂತಹ ಅಡಕೆಯನ್ನು ವಿವೇಚನೆ ಇಲ್ಲದೆ ಯಾವ ವೈಜ್ಞಾನಿಕ ಸಂಶೋಧನೆಯೂ ಇಲ್ಲದೆ, ವಿಷಪೂರಿತ ವಸ್ತು ಎಂಬುದಾಗಿ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿರುವುದು ಖಂಡನೀಯ ಎಂದರು.
ಬೀದಿಪಾಲು: ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದ ಆಧಾರದ ಮೇಲೆ ಸುಪ್ರೀಂಕೋರ್ಟ್ ಅಡಕೆ ನಿಷೇಧಿಸಿದರೆ, ಅಡಕೆ ಬೆಳೆಗಾರರು, ಗಾಂಜಾ ಬೆಳೆದವರು ಹೇಗೆ ಕ್ರಿಮಿನಲ್ ಆಗುತ್ತಾರೋ ಹಾಗೆಯೇ ಕ್ರಿಮಿನಲ್ಗಳಂತೆ ಕೇಸು ಹಾಕಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಲಕ್ಷಾಂತರ ಮಂದಿ ರೈತರು ಬೀದಿಪಾಲಾಗಲಿದ್ದಾರೆ ಎಂದು ಹೇಳಿದರು.
ಹಳದಿ ಎಲೆ ರೋಗದಿಂದಾಗಿ ಅಡಕೆ ಬೆಳೆಗಾರರು ನಷ್ಟ ಅನುಭವಿಸಿದಾಗ ಅವರ ನೆರವಿಗಾಗಿ ಗೋರಕ್ ಸಿಂಗ್ ನೇತೃತ್ವದ ಸಮಿತಿಯನ್ನು ಕೇಂದ್ರ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ರೈತರಿಗೆ ನೆರವು ನೀಡಲಾಗುವುದೆಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಇದೀಗ ಅಡಿಕೆ ವಿಷಪೂರಿತ ವಸ್ತು ಎಂದು ಪ್ರಮಾಣಪತ್ರ ಸಲ್ಲಿಸುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆಯಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.
ಮಲೆನಾಡಿಗರ ವಿರೋಧ: ರಾಜ್ಯದ 10 ಜಿಲ್ಲೆಗಳ 1549 ಕಂದಾಯ ಗ್ರಾಮಗಳ ವ್ಯಾಪ್ತಿಯನ್ನು ವಿಶ್ವಪರಂಪರೆಯ ಪಟ್ಟಿಯಲ್ಲಿ ಪಶ್ಚಿಮಘಟ್ಟವನ್ನು ಸೇರಿಸಲು ಸರ್ಕಾರ ಮುಂದಾಗಿದೆ. ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಿ ಇದಕ್ಕೆ ಮಲೆನಾಡು ಭಾಗದ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದರು.
ನ.13 ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆ ಕಾಯ್ದೆ, 1986ರ ಕಲಂ 5ರನ್ವಯ ಪರಿಸರ ಜೀವಿ  ಸೂಕ್ಷ್ಮ ಪ್ರದೇಶಗಳೆಂದು ನಿರ್ದೇಶನ ನೀಡಿ ಅಧಿಸೂಚನೆ ಹೊರಡಿಸಿತ್ತು. ನ. 16 ರಂದು ಕೇಂದ್ರ ಸರ್ಕಾರ ಈ ವರದಿಯನ್ನು ಒಪ್ಪಿಕೊಂಡಿದೆ. ಇದರಿಂದಾಗಿ ಮಲೆನಾಡು ಭಾಗದ ರೈತರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದರು.
ಸರ್ಕಾರ ಉದಾಸೀನತೆಯಿಂದಾಗಿ ರಾಜ್ಯದ 1,549 ಕಂದಾಯ ಗ್ರಾಮಗಳ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮ ಬೀರಲಿದೆ. ಈ ಭಾಗದ ಜನರು ಆತಂಕದಲ್ಲಿದ್ದಾರೆ. ಕರ್ನಾಟಕದ ನಿಲವು ಪರಿಗಣಿಸದೆ ರಾಜ್ಯದ ಜನಪ್ರತಿನಿಧಿಗಳ ನಿಲುವಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದ ಸಿ.ಟಿ. ರವಿ, ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿಯಿಂದ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement