ಪುರಸಭೆ ಆಸ್ತಿ ಉಳಿಸಲು ಮುಖ್ಯಾಧಿಕಾರಿಗಳಿಗೆ ಮನವಿ
ತರೀಕೆರೆ: ಪಟ್ಟಣದ ಪುರಸಭೆ ಆಸ್ತಿಯಾಗಿರುವ, ರೋಟರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವ ಸ್ಥಳನ್ಯಾಯಾಲಯ ಆದೇಶದಂತೆ ತೆರವುಗೊಳಿಸಬೇಕೆಂದು ನಾಗರಿಕ ಹೋರಾಟ ಸಮಿತಿ ಪ್ರಧಾನ ಸಂಚಾಲಕ ದೇವಾನಂದ್ ನೇತೃತ್ವದಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿಗಳಿಗೆ, ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದೆ.
ಪಟ್ಟಣದ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ, ಪುರಸಭೆ ಆಸ್ತಿಯಾಗಿರುವ ರೋಟರಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡವು ಕಳೆದ ಹಲವು ವರ್ಷಗಳಿಂದ ಆಸ್ತಿ ಹಕ್ಕಿನ ವಿಚಾರದ ವ್ಯಾಜ್ಯವಾಗಿ ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯ, ಜಿಲ್ಲಾ ಸೆಷನ್ಸ್ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯದಲ್ಲಿ ಸದರಿ ವ್ಯಾಜ್ಯವು ಇದೆ.
ಸೆಪ್ಟೆಂಬರ್ನಲ್ಲೇ ತೀರ್ಪು; ಪ್ರಕರಣ ಉಚ್ಚ ನ್ಯಾಯಾಲಯದ ಆದೇಶದಂತೆ ರೋಟರಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವ ಜಾಗ ಪುರಸಭೆಗೆ ಸಂಬಂಧಿಸಿದ್ದು, ಎಂದು ದಿನಾಂಕ 7-8-2013 ರಂದು ತನ್ನ ಆದೇಶದಲ್ಲಿ ತೀರ್ಪು ನೀಡಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಹೀಗಿದ್ದೂ ತೀರ್ಪು ಬಂದು ನಾಲ್ಕು ತಿಂಗಳ ನಂತರವೂ ಪುರಸಭೆಯಾಗಲೀ, ತಾಲೂಕು ಅಡಳಿತವಾಗಲೀ ಜಾಗ ತೆರವಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದ ಜಾಗ ಪುರಸಭೆಯ ಆಸ್ತಿಯಾಗಿರುವುದರಿಂದ ಈ ಕೂಡಲೇ ಸಂಬಂದಪಟ್ಟ ಆಡಳಿತ ವರ್ಗ ರೋಟರಿ ಜಾಗ ತೆರವುಗೊಳಿಸಿ ಪುರಸಭೆಯ ಆಸ್ತಿಯಾಗಿ ಉಳಿಸಿಕೊಳ್ಳಬೇಕೆಂದು ಕೋರಲಾಗಿದೆ. ಮನವಿ ಪತ್ರವನ್ನು ಸಚಿವರು ಮತ್ತು ಆಯುಕ್ತರು, ನಗರಾಭಿವೃದ್ದಿ ಹಾಗು ಪೌರಾಡಳಿತ ಇಲಾಖೆಗೆ ಕಳಿಸಲಾಗಿದೆ.
ಪ್ರಗತಿಪರ ಸಂಘಟನೆ ಪ್ರಧಾನ ಸಂಚಾಲಕ ಎನ್.ರಾಜು, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್. ರಮೇಶ್, ಮಾಜಿ ಪುರಸಭಾಧ್ಯಕ್ಷ ಟಿ.ಆರ್. ನಾಗರಾಜ್, ಕರವೇ ಅಧ್ಯಕ್ಷ ಆರ್.ಜಿ. ವಿಶ್ವನಾಥ್, ದಸಂಸ ಜಿಲ್ಲಾ ಸಂಚಾಲಕ ಎನ್. ವೆಂಕಟೇಶ್, ರೈತ ಸಂಘ ತರೀಕೆರೆ ಶಾಖೆ ಪ್ರಧಾನ ಕಾರ್ಯದರ್ಶಿ ಸುರೇಶ್, ದಸಂಸ ಸ್ವಾಮಿ ಇತರರಿದ್ದರು.