ರೈತ ಪಾಠಶಾಲೆ ಮೂಲಕ ಅಗತ್ಯ ಮಾಹಿತಿ: ಶಿವಮೂರ್ತಿ
ನರಸಿಂಹರಾಜಪುರ: ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ತಾಲೂಕಿನ ಕಾನೂರು ಮತ್ತು ಶಿರಗಳಲೆ ಗ್ರಾಮಗಳನ್ನು ಈ ವರ್ಷ ಆಯ್ಕೆ ಮಾಡಿಕೊಂಡು ರೈತ ಪಾಠಶಾಲೆ ಮೂಲಕ ರೈತರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದೇವೆ ಎಂದು ಕೃಷಿ ಇಲಾಖೆ ಸಹಾಯಕ ಅಧಿಕಾರಿ ವಿ.ಎಸ್. ಶಿವಮೂರ್ತಿ ತಿಳಿಸಿದರು.
ಶುಕ್ರವಾರ ಕಾನೂರು ಗ್ರಾಮದ ಕೆರೆಮನೆ ಪ್ರಶಾಂತ್ ಅವರ ಕೃಷಿ ಕ್ಷೇತ್ರದಲ್ಲಿ ನಡೆದ ಬತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಿದರು.
ಉತ್ತಮ ಬೆಲೆ: ಸಮಾರಂಭ ಉದ್ಘಾಟಿಸಿದ ಕೃಷಿಕ ಮಂಜುನಾಥ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಬತ್ತಕ್ಕೆ ಉತ್ತಮ ಬೆಲೆ ಬಂದಿದೆ. ಜೊತೆಗೆ ಕೃಷಿ ಇಲಾಖೆಯವರು ಸಹ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದರಿಂದ ರೈತರಿಗೆ ಆಧುನಿಕವಾಗಿ ಕೃಷಿ ಮಾಡಿ ಬತ್ತದ ಇಳುವರಿ ಹೆಚ್ಚಿಸಲು ಅನುಕೂಲವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾನೂರು ಗ್ರಾಪಂ ಅಧ್ಯಕ್ಷೆ ರಂಜಿತಾ ಮಾತನಾಡಿದರು.
6 ಅಧಿವೇಶನ: ಆತ್ಮ ಯೋಜನೆ ಅಧಿಕಾರಿ ಕು. ವೀಣಾ ಪ್ರಾಸ್ತಾವಿಕವಾಗಿ ಮಾತನಾಡಿ, ಆತ್ಮ ಯೋಜನೆಯಡಿ ನಡೆಯುವ ರೈತ ಪಾಠಶಾಲೆಯಲ್ಲಿ 6 ಅಧಿವೇಶನ ನಡೆಸುತ್ತಿದ್ದೇವೆ. ಬತ್ತದ ಬೀಜದ ಆಯ್ಕೆಯಿಂದ ಹಿಡಿದು ಬತ್ತದ ಕಟಾವಿನವರೆಗೂ ತಾಂತ್ರಿಕ ಮಾಹಿತಿ ನೀಡುತ್ತಿದ್ದೇವೆ ಎಂದರು.
ಪಶು ವೈದ್ಯಾಧಿಕಾರಿ ಡಾ. ರಾಕೇಶ್ ತಮ್ಮ ಇಲಾಖೆ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ಶ್ರೀಧರ್, ಕೆರೆಮನೆ ಕೃಷಿಕ ಪ್ರಶಾಂತ್ ಭಟ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತ ರಾಜೇಂದ್ರ ಅವರಿಗೆ ಪ್ರೋತ್ಸಾಹದಾಯಕ ಸಹಾಯ ಧನದ ಚೆಕ್ ವಿತರಿಸಲಾಯಿತು.