20 ನಿಮಿಷ 20 ಸುದ್ದಿ
ನಾಳೆ ಶೃಂಗೇರಿಯಲ್ಲಿ ಉಚಿತ ಆರೋಗ್ಯ ಶಿಬಿರ
ಶೃಂಗೇರಿ: ಮಂಗಳೂರಿನ ಎನಪೋಯ ಆಸ್ಪತ್ರೆ, ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಹಾಗೂ ಸಾರ್ವಜನಿಕ ಆಸ್ಪತ್ರೆ ಶೃಂಗೇರಿ ಇವರ ಸಹಯೋಗದೊಂದಿಗೆ ಡಿ.16ರ ಸೋಮವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ನರರೋಗ, ತಲೆನೋವು, ಮೂತ್ರಪಿಂಡದ ಕಲ್ಲು, ಮೂತ್ರ ರೋಗಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತಪಾಸಣೆ, ಶಸ್ತ್ರಚಿಕಿತ್ಸೆ ನಡೆಸಲಾಗುವುದು.
ಅರ್ಜಿ ಆಹ್ವಾನ: ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗೌರವಧನ ಆಧಾರದ ಮೇಲೆ ತಾಲೂಕಿನ ನೆಮ್ಮಾರು ಪಂಚಾಯಿತಿ ಮೇಲಿನ ನೆಮ್ಮಾರ್ ಹಾಗೂ ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಖಾಲಿ ಇರುವ ತಲಾ ಒಂದೊಂದು ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
ಚಿಕ್ಕಮಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕರ್ನಾಟಕವನ್ನು ಅಧಿಕೃತವಾಗಿ ಪ್ರತಿನಿಧಿಸಿ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ಪಡೆದ ಹಾಗೂ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳಿಂದ ನಗದು ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕವನ್ನು ಅಧಿಕೃತವಾಗಿ ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ ಪಡೆದವರಿಗೆ ಚಿನ್ನದ ಪದಕಕ್ಕೆ 1 ಲಕ್ಷ, ಬೆಳ್ಳಿ ಪದಕಕ್ಕೆ 50 ಸಾವಿರ, ಕಂಚಿನ ಪದಕಕ್ಕೆ 25 ಸಾವಿರ, ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದವರಿಗೆ 50 ಸಾವಿರ ನಗದು ಬಹುಮಾನ ನೀಡಲಾಗುವುದು.
ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ
ಮೂಡಿಗೆರೆ: ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ಅರಿವು ಮೂಡಿಸಿಕೊಳ್ಳಬೇಕು. ಕಾನೂನು ಅರಿವಿದ್ದಲ್ಲಿ ಅಪರಾಧ ನಿಯಂತ್ರಣ ಸಾಧ್ಯ ಎಂದು ಆಲ್ದೂರು ಪೊಲೀಸ್ ಠಾಣೆ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದರು.
ತಾಲೂಕಿನ ಆಲ್ದೂರು ವಲಯದ ಸತ್ತಿಹಳ್ಳಿಯ ಶಬರಿ ಜ್ಞಾನವಿಕಾಸ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಳ್ಳಲಾಗಿದ್ದ ಕಾನೂನು ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಕಾನೂನು ಸಂಬಂಧಗಳ ಬಗ್ಗೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಕಾನೂನುಗಳ ಬಗ್ಗೆ ತಿಳಿಸಿದರು. ಒಕ್ಕೂಟದ ಅಧ್ಯಕ್ಷ ರಾಜಣ್ಣ ಮತ್ತು ನಿತ್ಯ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕು. ನಾಗಲತಾ, ಮೇಲ್ವಿಚಾರಕ ಚೇತನ್ ಎಚ್. ಆರ್. ಸೇವಾ ಪ್ರತಿನಿಧಿ ದಾಕ್ಷಾಯಿಣಿ ಮತ್ತು ಜ್ಞಾನವಿಕಾಸ ಕೇಂದ್ರದ ಸದಸ್ಯರ ಉಪಸ್ಥಿತರಿದ್ದರು.
ಅಜ್ಜಂಪುರ- ಅಂತರಘಟ್ಟೆ ರಸ್ತೆ ಅಭಿವೃದ್ಧಿಗೆ ಆಗ್ರಹ
ತರೀಕೆರೆ: ಅಜ್ಜಂಪುರ ಮತ್ತು ಅಂತರಘಟ್ಟೆ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹಾಳಾಗಿದ್ದು, ನಿತ್ಯ ಸಂಚಾರ ನರಕಯಾತನೆ ಎನಿಸುವತ್ತಿದೆ. ಈ ಮಾರ್ಗದಲ್ಲಿ ರಸ್ತೆಯುದ್ದಕ್ಕೂ ತೆಗ್ಗು ಗುಂಡಿಗಳದ್ದೇ ಕಾರುಬಾರು. ಈ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲಾ ಬಸ್ ಆಸೋಸಿಯೇಷನ್ ಇಲಾಖೆಗೆ ಮನವಿ ಮಾಡಿದೆ.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಪಿ. ಚಂದ್ರಶೇಖರ್, ಖಚಾಂಚಿ ಬಿ.ತಿಪ್ಪೇಸ್ವಾಮಿ ಸಂಘದ ಪದಾಧಿಕಾರಿಗಳು ಈ ಬಗ್ಗೆ ಹೇಳಿಕೆ ನೀಡಿದ್ದು, ಲೋಕೋಪಯೋಗಿ ಇಲಾಖೆ ರಸ್ತೆಗಳು ತಾಲೂಕಿನಾದ್ಯಂತ ತೀವ್ರವಾಗಿ ಹಾಳಾಗಿವೆ. ವಾಹನಗಳಿರಲಿ, ಕೇವಲ ಕಾಲ್ನಡಿಗೆಗೂ ಯೋಗ್ಯವಾಗಿಲ್ಲದ ರಸ್ತೆಗಳಿಂದ ಜನತೆ, ವಾಹನ ಚಾಲಕರು, ಮಾಲಿಕರು ಬೇಸತ್ತಿದ್ದಾರೆ.ತರೀಕೆರೆ ಕಡೂರು ಬೀರೂರು ಆಸ್ಪತ್ರೆಗಳಿಗೆ ಸಕಾಲಕ್ಕೆ ರೋಗಿಗಳು, ಗರ್ಭಿಣಿಯರು, ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸುವುದು ತುಂಬಾ ದುರಸ್ತವಾಗಿದೆ.
ವಿದ್ಯಾರ್ಥಿಳಿಗೆ ಎಸ್ಸೆಸೆಲ್ಸಿ ಪ್ರಮುಖ ಘಟ್ಟ
ಮೂಡಿಗೆರೆ: ಇಂದಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಬಹಳ ಮಹತ್ವವಿದ್ದು, ವಿದ್ಯೆ ಇದ್ದವರು ಏನನ್ನು ಬೇಕಾದರೂ ಸಾಧಿಸಬಹುದು. ವಿದ್ಯಾರ್ಥಿಳಿಗೆ ಎಸ್ಸೆಸೆಲ್ಸಿ ಪ್ರಮುಖ ಘಟ್ಟವಾಗಿದ್ದು, ಈ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವುದರೊಂದಿಗೆ ಸುಲಭವಾಗಿ ಪರಿಕ್ಷೆ ಎದುರಿಸುವ ಬಗ್ಗೆ ತರಬೇತಿ ಅತಿ ಅಗತ್ಯ ಎಂದು ಮೂಡಿಗೆರೆ ರೋಟರಿ ಸಂಸ್ಥೆ ಅಧ್ಯಕ್ಷ ಬಿ.ಎಲ್. ಪ್ರಭಾಕರ್ ತಿಳಿಸಿದರು. ಪಟ್ಟಣದ ಸೆಂಟ್ ಮಾರ್ಥಾಸ್ ಕಾನ್ವೆಂಟ್ನಲ್ಲಿ ಮೂಡಿಗೆರೆ ರೋಟರಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಪರೀಕ್ಷಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಸೆಂಟ್ ಮಾರ್ಥಾಸ್ ಕಾನ್ವೆಂಟ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಶಾಲಿದ್ ವಹಿಸಿದ್ದರು. ರೋಟರಿ ಸಂಸ್ಥೆ ಕಾರ್ಯದರ್ಶಿ ಆಧುನಿಕ್, ರಾಘವೇಂದ್ರ, ಡಿ.ಎಸ್.ರವಿ, ಉಪಸ್ಥಿತರಿದ್ದರು.
ತೇಗೂರಿನಲ್ಲಿ ವೈಭವದ ಹನುಮ ಜಯಂತಿ
ಚಿಕ್ಕಮಗಳೂರು: ತಾಲೂಕಿನ ತೇಗೂರಿನಲ್ಲಿ ವಾರ್ಷಿಕ ಹನುಮ ಜಯಂತಿ ಉತ್ಸವ ನೂರಾರು ಭಕ್ತರ ನಡುವೆ ಶನಿವಾರ ವೈಭವದಿಂದ ಜರುಗಿತು.
ಜಯಂತಿ ಅಂಗವಾಗಿ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಅಭಿಷೇಕ, ಅಲಂಕಾರ, ವಿಶೇಷ ಪೂಜೆ, ಪವಮಾನ ಹೋಮ ನಡೆಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಮಹೇಶ್ ಭಟ್ ದಂಪತಿ ಹೋಮದ ಪೂರ್ಣಾಹುತಿ ನೆರವೇರಿಸಿದರು. ನಂತರ ಶ್ರೀ ವೀರಾಂಜನೇಯಸ್ವಾಮಿಯ ಉತ್ಸವಮೂರ್ತಿಯನ್ನು ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಬ್ರಹ್ಮ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಗ್ರಾಪಂ ಅಧ್ಯಕ್ಷ ದಿನೇಶ್ ರಾಜ್ ಅರಸ್, ಜಿಲ್ಲಾ ಅರಸು ಸಂಘದ ಅಧ್ಯಕ್ಷ ಅನಂತರಾಜ್ ಅರಸ್, ನಿವೃತ್ತ ಹಿರಿಯ ಪಶುಪರೀಕ್ಷಕ ಲಕ್ಷ್ಮಣರಾಜು, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಉದ್ಯಮಿ ಧನರಾಜ್ ಜೈನ್ ಇತರರು ಇದ್ದರು.
ಸಾಧನೆಗೆ ಪರಿಶ್ರಮವೇ ಅಡಿಗಲ್ಲು: ಶಿವಶಂಕರ್
ಆಲ್ದೂರು: ಸಾಧಿಸುವ ಛಲವಿದ್ದರೆ, ಸಾಧನೆಯ ಮೈಲುಗಲ್ಲು ಸಿಗುತ್ತದೆ. ಸಾಧನೆಗೆ ಪರಿಶ್ರಮವೇ ಅಡಿಗಲ್ಲು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಿವಶಂಕರ್ ಹೇಳಿದ್ದಾರೆ. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ವಿನ ಇತಿಹಾಸ ಸಂಘ ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಣದಲ್ಲಿ ಕುಟುಂಬದ ಪಾತ್ರ ಕುರಿತು ಎಸ್ಎಸ್ಎಲ್ಸಿ ವಿಧ್ಯಾರ್ಥಿಗಳೊಂದಿನ ಸಂವಾದದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕುಟುಂಬದಲ್ಲಿ ಬರುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿ ಜೀವನದಲ್ಲಿ ಸಾಧನೆಯ ಮೆಟ್ಟಿಲೇರಬೇಕೆಂದು
ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಚಾರ್ಯರಾದ ಯಾಸ್ಮಿನ್ ಫರ್ವಿನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಸುಮಂಗಲ ಜಿ.ಟಿ. ರಾಜಕುಮಾರ, ಸುಜಾತ ಪೈ ಇದ್ದರು.
ಬಂಡೆ ಆಂಜನೇಯ ಸ್ವಾಮಿಗೆ ಪ್ರಥಮ ಜಯಂತಿ
ಕಡೂರು: ಸಮೀಪದ ಮಲ್ಲೇಶ್ವರದಿಂದ ಕಲ್ಲಾಪುರಕ್ಕೆ ಸಾಗುವ ಶ್ರೀಗುರು ನಿರ್ವಾಣಸ್ವಾಮಿ ಬೆಟ್ಟದ ಹಿಂಭಾಗದ ಗುಡೇಕಲ್ಲು ಗೇಟ್ ಗುಡ್ಡದ ಬೃಹದಾಕಾರದ ಬಂಡೆಯ ಕೆಳಗೆ ಮೂಡಿರುವ ಶ್ರೀ ಆಂಜನೇಯಸ್ವಾಮಿ ಮೂರ್ತಿಗೆ ಸುತ್ತಮುತ್ತಲ ಗ್ರಾಮಸ್ಥರು ಹನುಮ ಜಯಂತಿ ಅಂಗವಾಗಿ ವಿಜೃಂಭಣೆಯಿಂದ ಪೂಜೆ, ಪುನಸ್ಕಾರ ನೆರವೇರಿಸಿದರು. ಸುತ್ತಮುತ್ತಲ ಗ್ರಾಮಗಳಾದ ಎಂ. ಕೋಡಿಹಳ್ಳಿ, ಕಲ್ಲಾಪುರ, ಬಿಳುವಾಲ, ಮಲ್ಲೇಶ್ವರ ರೈತರು ಸುತ್ತ ತಮ್ಮ ಜಮೀನುಗಳಿದ್ದರೂ ಕೂಡ ಇದುವರೆಗೂ ತಾವು ಸರಿಯಾಗಿ ಈ ಮೂರ್ತಿಯನ್ನು ನೋಡಿಲ್ಲ. ದೊಡ್ಡ ಬಂಡೆ ಕೆಳಗೆ ಶ್ರೀ ಆಂಜನೇಯ ಸ್ವಾಮಿ ಒಡೆದು ಮೂಡಿರುವುದನ್ನು ಕಂಡು ಹನುಮ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದರು.
ಗ್ರಾಮದ ಮುಖಂಡರಾದ ರಾಜಾನಾಯ್ಕ, ಬಸ್ ಜಗದೀಶ್, ಚಂದ್ರಪ್ಪ ಗೌಡರು, ಹನುಮಂತಪ್ಪ, ಪರಮೇಶ್ವರಪ್ಪ, ರೇವಣ್ಣ, ದಿನೇಶ್ ಸತೀಶನಾಯ್ಕ, ಶ್ರೀನಿವಾಸನಾಯ್ಕ, ಆನಂದ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧೆಡೆ ಸಂಭ್ರಮದ ದತ್ತ ಜಯಂತಿ
ಕಡೂರು: ವಿಹಿಪ ತಾಲೂಕು ಅಧ್ಯಕ್ಷ ಎಸ್.ಜಿ. ಕೊಪ್ಪಲು ನಾಗರಾಜ್ ಮತ್ತು ಬಜರಂಗದಳದ ಮುಖಂಡರ ನೇತೃತ್ವದಲ್ಲಿ ತಾಲೂಕಿನ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ನೂರಾರು ಸಂಖ್ಯೆಯಲ್ಲಿ ದತ್ತ ಭಕ್ತರು ದತ್ತ ಜಯಂತಿಯಲ್ಲಿ ಭಾಗವಹಿಸಲು ಮಾಲೆ ಧರಿಸಿದರು. ತಾಲೂಕಿನ ನಿಡುವಳ್ಳಿ, ಸಿಂಗಟಗೆರೆ, ಎಮ್ಮೇದೊಡ್ಡಿಯ ಸಿದ್ದರಹಳ್ಳಿ, ಹಳೇ ಸಿದ್ದರಹಳ್ಳಿ, ಪಾರ್ವತಿನಗರ, ನಿಡುವಳ್ಳಿ ಕೆ. ಬಿದರೆ, ಪಂಚನಹಳ್ಳಿ ಕಡೂರು ಮತ್ತಿತರ ಗ್ರಾಮಗಳಲ್ಲಿ ದತ್ತ ಭಕ್ತರಿಗೆ ಗುರುಸ್ವಾಮಿ ಪರಮೇಶ್ವರ್ ದತ್ತಮಾಲೆ ಧಾರಣೆ ಮಾಡುವ ಕಾರ್ಯಕ್ರಮ ನಡೆಸಲಾಯಿತು. ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ಕೊಪ್ಪಲು ನಾಗರಾಜ್ ಮತ್ತು ಭಜರಂಗದಳದ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿರುವ ದತ್ತ ಮಾಲಾಧಾರಣೆ ನಡೆಯುತ್ತಿದೆ. ಪಂಚನಹಳ್ಳಿಯ ನಿಡುವಳ್ಳಿಯಲ್ಲಿ ಭಜರಂಗದಳದ ಮುಖಂಡ ಮಧು, ವಿ.ಹಿ.ಪ.ನ ರಾಜ್ಯ ಕಾರ್ಯದರ್ಶಿ ಕೇಶವ ಹೆಗಡೆ ನೇತೃತ್ವದಲ್ಲಿ ದತ್ತಮಾಲೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಮಹಿಳೆಯರು ಮನೆ ಮದ್ದು ಅರಿಯಲಿ
ತರೀಕೆರೆ: ಇಲ್ಲಿನ ನಂದಿಬಟ್ಟಲು ಗ್ರಾಮದ ಆಯುರ್ವೇದ ಚಿಕಿತ್ಸಾಲಯದಲ್ಲಿ ಜಿಲ್ಲಾ ಆಯುಷ್ ಇಲಾಖೆ ಚಿಕ್ಕಮಗಳೂರು ವತಿಯಿಂದ ಉಚಿತ ಆಯುಷ್ ಚಿಕಿತ್ಸಾ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ, ಜನನ ಮರಣಕ್ಕೊಂದು ಔಷಧಿ ಗಿಡ ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ಕೃಷ್ಣಪ್ಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಈ ಹಿಂದೆ ಮನೆಯಲ್ಲಿಯೇ ಮದ್ದು ನೀಡುವ ವ್ಯವಸ್ಥೆ ಇತ್ತು. ಆದರೆ, ಇಂದು ಸಣ್ಣಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗೆ ತೆರಳಬೇಕಾಗಿದೆ. ಆಯುರ್ವೇದ ಔಷಧಿ ಉಪಯೋಗಿಸುವುದರಿಂದ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದಾಗಿದೆ. ಅನಗತ್ಯ ಹಣ ಖರ್ಚು ಮಾಡುವುದನ್ನು ಕಡಿಮೆ ಮಾಡಬಹುದಾಗಿದೆದೆ ಎಂದರು.
ಯಾದವ ಸಮಾವೇಶದ ಪೂರ್ವಭಾವಿ ಸಭೆ
ಕಡೂರು: ತಾಲೂಕಿನ ಕಲ್ಕೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಡಿ.17ರಂದು ನಡೆಯಲಿರುವ ಯಾದವ ಜನಾಂಗದ ಸಮಾವೇಶವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉದ್ಘಾಟಿಸಲಿದ್ದಾರೆ ಎಂದು ಶಾಸಕ ವೈಎಸ್ವಿ ದತ್ತ ತಿಳಿಸಿದರು. ಪಟ್ಟಣದಲ್ಲಿ ಯಾದವ ಸಮುದಾಯದ ಮುಖಂಡರೊಂದಿಗೆ ನಡೆದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಲ್ಕೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ ಕಾರ್ತಿಕೋತ್ಸವ ಮತ್ತು ಶ್ರೀ ಜುಂಜಪ್ಪಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಯಾದವ ಸಮಾವೇಶ ನಡೆಸಲಾಗುತ್ತಿದೆ ಎಂದರು.ಸಮಾವೇಶದಲ್ಲಿ ಯಾದವ ಸಮುದಾಯದ ಸಂಘಟನೆ ಮತ್ತು ಸಮುದಾಯಕ್ಕೆ ಸಾಮಾಜಿಕವಾಗಿ ಸಿಗಬೇಕಾಗಿರುವ ಸಾಮಾಜಿಕ, ರಾಜಕೀಯ ನ್ಯಾಯದ ಕುರಿತು ಸರ್ಕಾರದ ಗಮನ ಸೆಳೆಯುವಲ್ಲಿ ಮತ್ತು ಸಮಾಜಕ್ಕೆ ಆಗಬೇಕಾಗಿರುವ ಸವಲತ್ತಿನ ಬಗ್ಗೆ ಮಾತನಾಡಲಿದ್ದಾರೆ.
ನಿಷೇಧಿತ ಪಟ್ಟಿಯಲ್ಲಿ ಅಡಕೆ: ರೈತ ಸಂಘ ಖಂಡನೆ
ಕೊಪ್ಪ: ಅಡಕೆ ಬೆಳೆಯನ್ನು ನಿಷೇಧಿತ ಪಟ್ಟಿಯಲ್ಲಿ ಸೇರಿಸಿರುವ ಕುರಿತು ಗುಲ್ಲೆಬ್ಬಿಸಲಾಗಿದ್ದು, ಇಂತಹ ಕ್ರಮವನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಖಂಡಿಸುತ್ತದೆ ಎಂದು ರೈತ ಸಂಘದ ಕೆ.ಸಿ. ಸತೀಶ್ ಹೇಳಿದರು. ಅವರು ಇಲ್ಲಿನ ಸಂಘದ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಅಡಕೆ ಔಷಧೀಯ ಗುಣ ಹೊಂದಿ ಪ್ರಾಚೀನ ಕಾಲದಿಂದ ಬಳಕೆ ಮಾಡುತ್ತಿದ್ದು, ಅವೈಜ್ಞಾನಿಕ ವರದಿ ಆಧರಿಸಿ ನಿಷೇಧ ಕ್ರಮಕ್ಕೆ ಮುಂದಾಗದಂತೆ ಜನ ಪ್ರತಿನಿಧಿಗಳು ಶ್ರಮಿಸಬೇಕಾಗಿದೆ ಎಂದರು. ಅವರು ಅಡಕೆಯ ಕೊಯ್ಲಿನ ಸಂದರ್ಭದಲ್ಲಿ ಗುಟ್ಕಾ ನಿಷೇಧದ ಗುಮ್ಮ ಸೃಷ್ಟಿಸಿ ಧಾರಣೆ ಏರಿಳಿತಕ್ಕೆ ವ್ಯವಸ್ಥಿತ ಸಂಚು ನಡೆಯುತ್ತಿದೆ. ಇದರ ವಿರುದ್ಧ ರೈತರು ಜಾಗೃತರಾಗಿ ಹೋರಾಟ ನಡೆಸಬೇಕಾಗಿದೆ. ಅಡಕೆ ನಿಷೇಧದ ಕುರಿತು ವಾಸ್ತವ್ಯ ವಿಚಾರಗಳನ್ನು ಜನಪ್ರತಿನಿಧಿಗಳು ಜನರಿಗೆ ತಿಳಿಸಬೇಕಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ, ಸುಧೀರ್ ಕುಮಾರ್, ಚಿಂತನ್, ಗಣೇಶ್, ಶೆಟ್ಟಿ ಇದ್ದರು.
ಮೈಸೂರು ಅರಸಒಡೆಯರ್ಗೆ ಶ್ರದ್ಧಾಂಜಲಿ
ಕಡೂರು: ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಮಹಾರಾಜರು ತಮ್ಮ ರಾಜ್ಯದ ಜನರ ಯೋಗ ಕ್ಷೇಮ ಮತ್ತು ಅಭಿವೃದ್ಧಿಗೆ ಶ್ರಮಿಸುವ ಮೂಲಕ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಹೇಳಿದರು. ಪಟ್ಟಣದ ಕಸಾಪ ಭವನದಲ್ಲಿ ನಡೆದ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಶ್ರದ್ಧಾಂಜಲಿ ಸಭೆಯಲ್ಲಿ ಒಡೆಯರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಕಡೂರು, ತರೀಕೆರೆ ತಾಲೂಕುಗಳಿಗೆ ಭೇಟಿ ನೀಡಿ ಈ ಭಾಗದ ಉತ್ತಮ ತಳಿಯಾದ ಅಮೃತ್ ಮಹಲ್ ತಳಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಅಲ್ಲದೆ ತಾಲೂಕು ಒಂದರಲ್ಲಿಯೇ ಸುಮಾರು 20 ಸಾವಿರ ಎಕರೆ ಪ್ರದೇಶವನ್ನು ದನಕರುಗಳ ಮೇವಿಗಾಗಿ ಅಮೃತ್ ಮಹಲ್ ಕಾವಲು ಎಂದು ಮೀಸಲಿಟ್ಟಿರುವುದರಿಂದ ಜಾನುವಾರುಗಳಿಗೆ ನೀರು, ಮೇವು ಸಿಗುತ್ತಿದೆ ಎಂದರು.
21ರಂದು ಬಿಲ್ಲವ ಸಮಾಜ ಉದ್ಘಾಟನೆ
ಶೃಂಗೇರಿ: ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಡಿ. 21 ರಂದು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ರಾಷ್ಚ್ರೀಯ ಬಿಲ್ಲವ ಮಹಾಮಂಡಳಿಯ ಅಧ್ಯಕ್ಷ ಜಯಶ್ರೀ ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಯುವ ಜನ, ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಅಭಯ ಚಂದ್ರಜೈನ್, ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಡಿ.ಎನ್. ಜೀವರಾಜ್, ಕೋಟ ಶ್ರೀನಿವಾಸಪೂಜಾರಿ, ಗಾಯತ್ರಿ ಶಾಂತೇಗೌಡ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷ ಮಹಾಬಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ನೇಪಥ್ಯಕ್ಕೆ ಸರಿಯುತ್ತಿರುವ ಜನಪದ ಕ್ರೀಡೆ: ವಿಷಾದ
ಸಾಗರ: ಆಧುನಿಕ ಕ್ರೀಡೆಗಳ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ಜನಪದೀಯ ಕ್ರೀಡೆಗಳು ನೇಪಥ್ಯಕ್ಕೆ ಸರಿಯುತ್ತಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು. ಕೆಳದಿ ಉತ್ಸವದ ಅಂಗವಾಗಿ ಕೆಳದಿ ಉತ್ಸವ ಆಚರಣಾ ಸಮಿತಿ ಶುಕ್ರವಾರ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಗುರಿಕಾಯಿ ಹೊಡೆಯುವ ಮೂಲಕ ಉದ್ಘಾಟಿಸಿ, ಯುವಜನರು ದಿಢೀರ್ ಹಣ ಹಾಗೂ ಪ್ರಚಾರ ಗಿಟ್ಟಿಸುವ ಕ್ರೀಡೆಯತ್ತ ಆಕರ್ಷಿತರಾಗುತ್ತಿರುವುದು ವಿಷಾದನೀಯ ಎಂದರು. ವ್ಯಕ್ತಿಯನ್ನು ಮಾನಸಿಕ ಹಾಗೂ ದೈಹಿಕವಾಗಿ ಸಜ್ಜಗೊಳಿಸುವ ಕ್ರೀಡೆಯತ್ತ ಯುವಜನರು ಆಸಕ್ತಿ ಬೆಳೆಸಿಕೊಳ್ಳಬೇಕು. ಹಿಂದೆ ಗ್ರಾಮೀಣರು ಕೃಷಿ ಚಟುವಟಿಕೆ ನಂತರ ಮನೋವಿಕಾಸಕ್ಕಾಗಿ ವಿವಿಧ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ಎಂದರು. ಎಸಿ ಡಾ .ಉದಯಕುಮಾರ್ ಶೆಟ್ಟಿ, ಸಿದ್ದಪ್ಪ, ಸುರೇಶ್, ಲಿಂಗಪ್ಪ, ಜೋಯಪ್ಪ, ಬ್ಯಾನರ್ಜಿ, ಸುಮಂಗಲ ಇದ್ದರು.
ಮಾಸ್ತಿಕಟ್ಟೆ ಕೆಪಿಸಿ ಉಳಿಸಿ ಹೋರಾಟಕ್ಕೆ ಗ್ರಾಮಸ್ಥರು ಸಜ್ಜು
ಹೊಸನಗರ: ವಾರಾಹಿ ಯೋಜನೆಯ ನಿರ್ವಹಣೆಗೆ ಮಾಸ್ತಿಕಟ್ಟೆ ಸೂಕ್ತ ಪ್ರದೇಶವಾಗಿದ್ದರೂ ಅವೈಜ್ಞಾನಿಕವಾಗಿ ಕೆಪಿಸಿಯನ್ನು ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಹೋರಾಟಕ್ಕಿಳಿಯಲು ಗ್ರಾಮಸ್ಥರು ಸಜ್ಜಾಗಿದ್ದಾರೆ.
ವಿದ್ಯುತ್ ಯೋಜನೆಗಾಗಿ ಎಲ್ಲವನ್ನು ಬರಿದು ಮಾಡಿಕೊಂಡ ಜನರ ಹಿತರಕ್ಷಣೆಗೆ ಕೆಪಿಸಿ ಮುಂದಾಗಬೇಕಿತ್ತು. ಆದರೆ ಇದ್ದ ಮತ್ತು ಇರಬಹುದಾದ ವ್ಯವಸ್ಥೆಯನ್ನು ಕಸಿದುಕೊಳ್ಳುತ್ತಿರುವ ಕೆಪಿಸಿ ಕ್ರಮ ಸರಿಯಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿ ಮಾಸ್ತಿಕಟ್ಟೆಯಿಂದ ಕೆಪಿಸಿ ಸ್ಥಳಾಂತರ ರದ್ದುಗೊಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಮಾಸ್ತಿಕಟ್ಟೆಯಿಂದ ಕೆಪಿಸಿ ಅವೈಜ್ಞಾನಿಕ ಸ್ಥಳಾಂತರದಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ಆಗುವ ನಷ್ಟ ಮತ್ತು ಕೆಪಿಸಿಗೆ ಅನಗತ್ಯ ವೆಚ್ಚ ಮತ್ತು ಇತರ ಪರಿಣಾಮವಾಗಿ “OÚ«ÚsÚ®Úúڒ¥ÚÆÇ 3 ದಿನಗಳ ಕಾಲ ವರದಿ ಪ್ರಕಟಗೊಂಡಡಿತ್ತು.