ಅನಸೂಯ ಜಯಂತಿ ನೀರಸ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಡಿ.14
ಸಂಘ ಪರಿವಾರ ಮೂರು ದಿನಗಳ ಕಾಲ ಆಯೋಜಿಸಿರುವ ದತ್ತ ಜಯಂತಿ ಉತ್ಸವದ ಮೊದಲನೇ ದಿನವಾದ ಶನಿವಾರ ನಡೆದ ಅನುಸೂಯ ಜಯಂತಿ ಹಾಗೂ ಅದರ ಅಂಗವಾಗಿ ಆಯೋಜಿಸಲಾಗಿದ್ದ ಸಂಕೀರ್ತನಾ ಯಾತ್ರೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಹಿಳೆಯರು ಪಾಲ್ಗೊಂಡಿರಲಿಲ್ಲ.
ಅಂದರೆ ಕಳೆದ ವರ್ಷ ನಡೆದಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಶನಿವಾರದಂದು ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಮಹಿಳೆಯ ಸಂಖ್ಯೆ ಕಡಿಮೆಯಾಗಿತ್ತು.
ಇಲ್ಲಿನ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ನಿಗದಿತ ಸಮಯಕ್ಕೆ ಅಂದರೆ ಬೆಳಗ್ಗೆ 9 ಗಂಟೆಗೆ ಸಂಕೀರ್ತನಾ ಯಾತ್ರೆ ಹೊರಡಬೇಕಾಗಿತ್ತು. ಆದರೆ, ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿದ್ದರಿಂದ ಎರಡು ಗಂಟೆಗಳ ಕಾಲ ತಡವಾಗಿ ಯಾತ್ರೆ ಹೊರಡಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಯಾತ್ರೆಯ ಮುಂಚೂಣಿಯಲ್ಲಿದ್ದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಭಾಗ್ಯ ರಂಗನಾಥ್, ತಾಪಂ ಅಧ್ಯಕ್ಷೆ ಅಂಬಿಕಾ ಶಿವಕುಮಾರ್ ಸೇರಿದಂತೆ ಬಿಜೆಪಿಯ ಮಹಿಳಾ ಮುಖಂಡರು ಸಂಕೀರ್ತನಾ ಯಾತ್ರೆಯಲ್ಲಿದ್ದರು.
ಮಳೆಯರ ಸಂಖ್ಯೆ ಕಡಿಮೆ: ಹಿಂದಿನ ವರ್ಷಗಳಲ್ಲಿ ನಡೆದ ಸಂಕೀರ್ತನಾ ಯಾತ್ರೆಗಳಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷರೂ ಸೇರಿದಂತೆ ಬಿಜೆಪಿಯ ವಿಧಾನಪರಿಷತ್ ಸದಸ್ಯರು, ರಾಜ್ಯ ಕಾರ್ಯಕಾರಿಣಿ ಸದಸ್ಯರು ಭಾಗವಹಿಸುತ್ತಿದ್ದರು. ಆದರೆ, ಅವರು ಈ ಬಾರಿ ಭಾಗವಹಿಸಿರಲಿಲ್ಲ. ಇನ್ನು ಸ್ಥಳೀಯವಾಗಿ ಹೇಳುವುದಾದರೆ, ನಗರ ಪ್ರದೇಶದ ಮಹಿಳೆಯರ ಸಂಖ್ಯೆಯೂ ಕಡಿಮೆ ಇತ್ತು.
ಸಂಕೀರ್ತನಾ ಯಾತ್ರೆ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಐ.ಜಿ. ರಸ್ತೆ, ರತ್ನಗಿರಿ ರಸ್ತೆಯ ಮೂಲಕ ಶ್ರೀ ಕಾಮಧೇನು ಗಣಪತಿ ದೇವಾಲಯಕ್ಕೆ ತಲುಪಿತು. ನಂತರದಲ್ಲಿ ಮಹಿಳೆಯರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದರು.
ಬಳಿಕ ಮಾತೆಯರು ನಾಗೇನಹಳ್ಳಿ ಮಾರ್ಗದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ನಿರ್ಮಿಸಿರುವ ಪೆಂಡಲ್ ನತ್ತಾ ಬಂದ ಮಹಿಳೆಯರಿಗೆ ಹಿಂದೂ ಸಂಪ್ರದಾಯದ ಪ್ರಕಾರ ಹಸಿರು ಬಳೆ ಮತ್ತು ಕುಂಕುಮ ನೀಡಲಾಯಿತು. ಇದೇ ವೇಳೆಯಲ್ಲಿ ಮಹಿಳೆಯರು ಭಜನೆ ಹಾಕಿದರು. ಅನುಸೂಯ ಪೂಜೆ, ಗಣಪತಿ ಹೋಮ, ದುರ್ಗಾ ಹೋಮ ನಡೆಯಿತು. ಶಾಸಕ ಸಿ.ಟಿ. ರವಿ ಹಾಗೂ ಅವರ ಪತ್ನಿ ಪಲ್ಲವಿ ರವಿ ಸಹ ಪಾಲ್ಗೊಂಡಿದ್ದರು.
ದತ್ತಪೀಠಕ್ಕೆ ಆಗಮಿಸಿದ್ದ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ದತ್ತಪೀಠದ ಗುಹೆಯೊಳಗಿರುವ ಗರ್ಭ ಗುಡಿಯೊಳಗೆ ಹೋಗಲು ಅವಕಾಶ ನೀಡುವಂತೆ ಕೋರಿದಾಗ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ನಿರಾಕರಿಸಿದರು. ಆಗ, ಶಾಸಕ ಸಿ.ಟಿ. ರವಿ ಅವರು ಮಧ್ಯ ಪ್ರವೇಶಿಸಿ ಮಠಾಧೀಶರಿಗೆ ಒಳಗೆ ಹೋಗಲು ಅನುಮತಿ ನೀಡಬೇಕು ಎಂದು ಹೇಳಿದ ಮೇರೆಗೆ ಸ್ವಾಮೀಜಿಯವರಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.
ಹಿಂದೂಗಳ ಪೀಠ: ದತ್ತಪೀಠದ ಹೊರ ವಲಯದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಶಾಸಕ ಸಿ.ಟಿ. ರವಿ, ಈ ದೇಶಕ್ಕೆ ಒಳ್ಳೆಯದಾಗಲೀ, ದೇಶಕ್ಕೆ ಸಮರ್ಥ ನಾಯಕತ್ವ ಸಿಗಲಿ ಎಂದು ಅನುಸೂಯ ದೇವಿಯಲ್ಲಿ ವೈಯಕ್ತಿಕವಾಗಿ ಸಂಕಲ್ಪ ಮಾಡಿದ್ದೇನೆ ಎಂದರು.
ಇಲ್ಲಿರುವುದು ದತ್ತಪೀಠ ಎಂದು ನೂರಾರು ವರ್ಷಗಳ ದಾಖಲೆ ಹೇಳುತ್ತಿವೆ. ಕಂದಾಯ ಇಲಾಖೆಯ ದಾಖಲೆಗಳು ಸಹ ಇದನ್ನೇ ಹೇಳುತ್ತಿವೆ. ಹಿಂದೂಗಳ ಹಕ್ಕನ್ನು ಇಲಾಖೆ ಎತ್ತಿ ಹಿಡಿದಿದೆ. ಇದು, ಹಿಂದೂಗಳ ಪೀಠ ಎಂಬುದಾಗಿ ಕೆಳ ಹಂತದ ನ್ಯಾಯಾಲಯಗಳು ಸಹ ಹೇಳಿವೆ. ನಾಗೇನಹಳ್ಳಿಯಲ್ಲಿ ದರ್ಗಾ ಇದೆ. ಮುಸ್ಲಿಂ ಸಮುದಾಯದವರು ಅಲ್ಲಿ ವೈಭವದಿಂದ ಉರುಸ್ ಆಚರಣೆ ಮಾಡಲಿ ಎಂದರು.
ಇಂದು ಶೋಭಾಯಾತ್ರೆ: ದತ್ತಜಯಂತಿ ಅಂಗವಾಗಿ ಭಾನುವಾರ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಯಲಿದೆ.
ಇಲ್ಲಿನ ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಭಾನುವಾರ ಮಧ್ಯಾಹ್ನ 2.30ಕ್ಕೆ ವಿವಿಧ ಕಲಾ ತಂಡಗಳೊಂದಿಗೆ ಹೊರಡಲಿರುವ ಶೋಭಾಯಾತ್ರೆ, ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯ ಮೂಲಕ ಆಜಾದ್ ಪಾರ್ಕ್ಗೆ ತೆರಳಲಿದೆ. ಸಂಘಪರಿವಾರದ ಮನವಿ ಮೇರೆಗೆ ಆಜಾದ್ ಪಾರ್ಕ್ ವೃತ್ತದಲ್ಲಿ ಧಾರ್ಮಿಕ ಸಭೆಯನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ.